ಸರ್ಕಾರದ ಮಲತಾಯಿ ಧೋರಣೆ ಪ್ರತ್ಯೇಕ ರಾಜ್ಯ ಕೂಗಿಗೆ ಕುಮ್ಮಕ್ಕು: ದಸ್ತಿ

ಕಲಬುರಗಿ,ಡಿ.25-ರಾಜ್ಯ ಸರ್ಕಾರ ಮೂಗಿಗೆ ತುಪ್ಪ ಸವರುವಂತೆ ಈ ಪ್ರದೇಶಕ್ಕೆ ಹೆಸರಿಗೆ ಮಾತ್ರ “ಕಲ್ಯಾಣ ಕರ್ನಾಟಕ” ಎಂದು ನಾಮಕರಣ ಮಾಡಿ ಇದಕ್ಕೆ ಪೂರಕವಾಗಿ ಸಮರೋಪಾದಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಮಲಧೋರಣೆ ಅನಸರಿಸುತ್ತಿರುವದು ನೋಡಿದರೆ, ಸರ್ಕಾರವೇ ಪ್ರತ್ಯೇಕ ರಾಜ್ಯ ಕೇಳಿರಿ ಎಂಬುವುದಕ್ಕೆ ಪೂರಕವಾಗಿ ವರ್ತಿಸುವಂತಿದೆ ಎಂದು ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಂತ್ರಿ ಮಂಡದಲ್ಲಿ ಪ್ರಾತಿನಿಧ್ಯ ನೀಡಿಲ್ಲ. ನಮಗೆ ನೀಡಬೇಕಾದ ಅನುವಾದದಲ್ಲಿ ಕಡಿತ ಮಾಡಿದೆ, ನಾಮಕೇವಾಸ್ತೆ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಿದೆ, ಭರವಸೆ ನೀಡಿದಂತೆ ವಿಶೇಷ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಮಂತ್ರಾಲಯ ಸ್ಥಾಪನೆ ಮಾಡಿಲ್ಲ, 371 (ಜೆ) ಕಲಂನ ವಿಶೇಷ ಕೋಶ ಕಛೇರಿಯ ಪ್ರಾದೇಶಿಕ ಕಛೇರಿ ಕಲಬುರಗಿಯಲ್ಲಿ ಅಸ್ತಿತ್ವಕ್ಕೆ ತಂದಿಲ್ಲ, 371ನೇ (ಜೆ) ಕಲಂ ತಿದ್ದುಪಡಿಯ ನಿಯಮಗಳಲ್ಲಿರುವ ದೋಷಗಳ ನಿವಾರಣೆ ಮಾಡಿಲ್ಲ, ಆದರೆ ಈಗ ಇದಕ್ಕೆ ವಿರುದ್ಧವಾಗಿ ಇಲ್ಲಿರುವ ಪ್ರಾದೇಶಿಕ ಮಟ್ಟದ ಕಛೇರಿಗಳು ಬೇರೆ ವಿಭಾಗಕ್ಕೆ ಸ್ಥಳಾಂತರ ಮಾಡುತ್ತಿರುವದು ನೋಡಿದರೆ ಸರ್ಕಾರ ನಮ್ಮ ಪ್ರದೇಶಕ್ಕೆ ರಾಜಾರೋಷವಾಗಿ ಮಲತಾಯಿ ಧೋರಣೆ ಮಾಡುತ್ತಿದೆ.ಕೆಲವು ದಿನಗಳ ಹಿಂದೆ ಇಂಧನ ಪ್ರಾದೇಶಿಕ ಕಛೇರಿ ಬೇರೆಡೆಗೆ ಸ್ಥಳಾಂತರ ಮಾಡಿ, ಈಗ ಆಹಾರ ಪ್ರಯೋಗಾಲಯ ಕೇಂದ್ರ ಸ್ಥಳಾಂತರ ಮಾಡುತ್ತಿರುವದು ನೋಡಿದರೆ ಸರ್ಕಾರದ ಅಸಲಿ ನಿಯತ್ತು ಎನೆಂಬುವದು ಗೂತ್ತಾಗುತ್ತಿದೆ.ಇಂತಹ ಗಂಭೀರವಾದ ವಿಷಯಗಳನ್ನು ಇಲ್ಲಿನ ಸಂಸದರು, ಶಾಸಕರು ಸವಾಲಾಗಿ ಸ್ವೀಕರಿಸಿ ಸ್ಥಳಾಂತರ ಮಾಡುತ್ತಿರುವ ಕಛೇರಿಗಳು ಯಥಾ ಸ್ಥಿತಿಯಾಗಿ ಇಲ್ಲಿಯೆ ಮುಂದುವರಿಸಲು ತಕ್ಷಣ ಸ್ಪಂದಿಸಿ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಬಗ್ಗೆ ತನ್ನ ನಿಲುವು ಎನೆಂಬುವದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.