ಸರ್ಕಾರದ ಭ್ರಷ್ಟಾಚಾರ ಪಿಡುಗಿಗೆ ಔಷಧಿ ಎಲ್ಲಿಂದ ತರಲಿ? ಸಿದ್ದು ಪ್ರಶ್ನೆ


ಬೆಂಗಳೂರು,ಮಾ.೧೯- ಕೊರೊನಾ ನಿಯಂತ್ರ ಣದ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ಸೋಂಕಿಗೆ ಲಸಿಕೆ ಬಂದಿದೆ. ಆದರೆ, ಮುಖ್ಯಮಂತ್ರಿ ಬಿ.ಎಸ್
ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಅಂಟಿಕೊಂಡಿರುವ ಭ್ರಷ್ಟಾಚಾರದ ಪಿಡುಗಿಗೆ ಲಸಿಕೆ ಎಲ್ಲಿಂದ ತರುವುದು ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಮತ್ತೆ ಕೊರೊನಾ ಪಿಡುಗು ಉಲ್ಬಣಗೊಳ್ಳುತ್ತಿದ್ದು, ಸೋಂಕು ನಿಯಂತ್ರಣದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ತಮ್ಮ ಆರೋಪಕ್ಕೆ ಮತ್ತೆ ಸೋಂಕು ಹೆಚ್ಚಳವಾಗಿ ಕೇಕೆ ಹಾಕುತ್ತಿರುವ ಕೊರೊನಾ ಸಾಕ್ಷಿ ಹೇಳುವಂತಿದೆ ಎಂದು ಅವರು ಹೇಳಿದ್ದಾರೆ.
ಸೋಂಕು ನಿಯಂತ್ರಣಕ್ಕೆ ಹಣ ಖರ್ಚು ಮಾಡಿದ್ದರೆ, ಮತ್ತೆ ಸೋಂಕು ಏಕೆ ಉಲ್ಬಣಗೊಳ್ಳುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಕೊರೊನಾ ಮೊದಲ ಅಲೆಯ ನಿಯಂತ್ರಣದ ವೇಳೆ ಉಂಟಾಗಿದ್ದ ಲೋಪ-ದೋಷಗಳನ್ನು ಸರಿಪಡಿಸಿಕೊಂಡು ಕೊರೊನಾ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೊನಾ ನಿಯಂತ್ರಣದ ಹೆಸರಿನಲ್ಲಿ ಸಂಪನ್ಮೂಲ ವ್ಯಯ ಮಾಡಬೇಕಾಗಿದೆ ಎಂಬ ಕುಂಟು ನೆಪ ಹೇಳಿ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ
ಕಡಿತಗೊಳಿಸಿದ ಬಗ್ಗೆ ಮುಖ್ಯಮಂತ್ರಿಗಳು ಈಗ ಏನು ಹೇಳುತ್ತಾರೆ. ಅಷ್ಟೊಂದು ಆದ್ಯತೆ ನೀಡಿದ್ದರೆ ಕೊರೊನಾ ನಿಯಂತ್ರಣಕ್ಕೆ ಬರಬೇಕಿತ್ತಲ್ಲವೆ. iತ್ತೆ ಏಕೆ ನಿಯಂತ್ರಣ ತಪ್ಪಿದೆ ಎಂದು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಮುಖ್ಯಮಂತ್ರಿಗಳು ಇತ್ತೀಚೆಗೆ ಮಂಡಿಸಿದ ಮುಂಗಡಪತ್ರದಲ್ಲಿ ಕೊರೊನಾ ನಿರ್ವಹಣೆಗಾಗಿ ೫,೩೭೨ ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ಈ ಬಗ್ಗೆ ಮಾಹಿತಿಯೇ ಇಲ್ಲ. ಈಗಲಾದರೂ ಈ ಹಣ ಯಾವ ಉದ್ದೇಶಗಳಿಗೆ ಖರ್ಚು ಮಾಡಿದ್ದೀರಿ ಎಂಬ ವಿವರವನ್ನು ರಾಜ್ಯದ ಜನರ ಮುಂದಿಡಬೇಕು ಎಂದಿದ್ದಾರೆ.