ಸರ್ಕಾರದ ಭಾವನೆಗಳಿಗೆ ಮತದಾರರ ಸ್ಪಂದನೆ- ಬಿಎಸ್ ವೈ ಪ್ರತಿಕ್ರಿಯೆ

ಬೆಂಗಳೂರು ನ 10- ಉಪ ಸಮರದ ಎರಡು ಕ್ಷೇತ್ರದಲ್ಲಿ ನಮ್ಮನ್ನು ಗೆಲ್ಲಿಸುವ ಮೂಲಕ ಜನರು ರಾಜ್ಯ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮತದಾನ ಮಾಡಿದ ಮತದಾರರಿಗೆ ಧನ್ಯವಾದ ಸಮರ್ಪಿಸಿದರು.
ರಾಜ್ಯ ಸರ್ಕಾರದ ಭಾವನೆಗಳಿಗೆ ಸ್ಪಂದಿಸಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ ಈ ಗೆಲುವು ಜನರಿಗೆ ಸೇರಿದ ವಿಜಯವಾಗಿದೆ.ಪ್ರವಾಹ ಮತ್ತು ಕೊರೊನಾದಂತಹ ಸಂಕಷ್ಟದಲ್ಲೂ ಉತ್ತಮ ಕಾರ್ಯ ಕೈಗೊಂಡಿದ್ದೇವೆ ಎಂದು ಹೇಳಿದರು.
ಉಪಸಮರದ‌ ವೇಳೆ ನೀಡಿದ ಭರವಸೆಯನ್ನು ಈಡೇರಿಸುತ್ತೇವೆ. ಇದರ ಜತೆಗೆ ಬಿಹಾರದಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಿದೆ. ಮಧ್ಯ ಪ್ರದೇಶದಲ್ಲಿ 19 ಹಾಗೂ ಗುಜರಾತ್ ನಲ್ಲಿ ಎಂಟೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಅವರು ತಿಳಿಸಿದರು.
ಆರ್.ಆರ್ ನಗರದ ಗೆಲುವು ಅತ್ಯಂತ ದೊಡ್ಡ ಗೆಲುವಾಗಿದೆ. ಶಿರಾದಲ್ಲೂ ಕೂಡ 15 ಸಾವಿರ ಅಂತರದಲ್ಲಿ ಗೆದ್ದಿದ್ದೇವೆ. ನಮ್ಮ ಸರ್ಕಾರ ಜನಪರ ಸರ್ಕಾರ ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ನನ್ನ ಅವಧಿಯಲ್ಲಿ ಯಾವ ಯಾವ ಕೆಲಸ ಕಾರ್ಯಗಳು ನಡೆಯಬೇಕು ಅದನ್ನು ಪೂರ್ಣ ಮಾಡುತ್ತೇನೆ. ಮುಂದಿನ ದಿನದಲ್ಲಿ ಪಕ್ಷದ ವರಿಷ್ಠರ ಜೊತೆ ಮಾತನಾಡಿ ಸಂಪುಟ ವಿಸ್ತರಣೆಯನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.
ಮುಂಬರುವ ಬಸವ ಕಲ್ಯಾಣ, ಮಸ್ಕಿ ವಿಧಾನಸಭಾ ಉಪಚುನಾವಣೆ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರೀ ಉಪಚುನಾವಣೆಯಲ್ಲಿ ವಿಜಯೇಂದ್ರ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಅವರು ಪ್ತಶ್ನೆಯೊಂದಕ್ಕೆ ಉತ್ತರಿಸಿದರು.