ಸರ್ಕಾರದ ನಿರ್ಲಕ್ಷ್ಯ : ಕೊರೊನಾ ಸಾವು – ನೋವಿಗೆ ಕಾರಣ: ಸಿದ್ದು

ಬೆಂಗಳೂರು, ಏ. ೨೮- ರಾಜ್ಯದಲ್ಲಿ ಕೊರೊನಾ ೨ನೇ ಅಲೆಯಿಂದ ಆಗುತ್ತಿರುವ ಸಾವು ನೋವುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅದಕ್ಷತೆ ಮತ್ತು ನಿರ್ಲಕ್ಷ್ಯಗಳೇ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.
ಕೊರೊನಾ ಸೋಂಕು ನಿಯಂತ್ರಣ, ಸೋಂಕಿತರಿಗೆ ಚಿಕಿತ್ಸೆ ನೀಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು, ಸರ್ಕಾರದ ನಿರ್ಲಕ್ಷ್ಯದಿಂದಲೇ ರಾಜ್ಯದಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ೨ನೇ ಅಲೆಯ ಬಗ್ಗೆ ತಜ್ಞರು ಮೊದಲೇ ಸಲಹೆ ನೀಡಿದ್ದರೂ ಅದನ್ನು ಕೇಂದ್ರ ಹಾಗೂ ರಾಜ್ಯಗಳು ನಿರ್ಲಕ್ಷಿಸಿದವು. ಹಾಗಾಗಿ ೨ನೇ ಅಲೆಯಲ್ಲಿ ಸಾವು-ನೋವುಗಳು ಹೆಚ್ಚಾಗಿವೆ. ಇದಕ್ಕೆ ಸರ್ಕಾರವೇ ಕಾರಣ ಎಂದು ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ತಜ್ಞರ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ ಔಷಧಿ, ಐಸಿಯು, ಆಮ್ಲಜನಕ, ಹಾಸಿಗೆ ವ್ಯವಸ್ಥೆಗಳನ್ನು ಮಾಡಬೇಕಿತ್ತು ಎಂದು ಅವರು ತಿಳಿಸಿದ್ದಾರೆ.
ಕೊರೊನಾ ೨ನೇ ಅಲೆ ತಡೆಯಲು ಏನು ಮಾಡಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ೨೦೨೧ರ ಜನವರಿ ೨೦ ರ ಆರಂಭದಲ್ಲಿದ್ದ ಪರಿಸ್ಥಿತಿಯಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿ. ಎಷ್ಟು ಐಸಿಯು- ಬೆಡ್‌ಗಳನ್ನು ವ್ಯವಸ್ಥೆ ಮಾಡಿದ್ದೀರಿ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ತಜ್ಞ ವೈದ್ಯ ಡಾ. ದೇವಿಶೆಟ್ಟಿ ಅವರ ಪ್ರಕಾರ ಕೊರೊನಾ ೨ನೇ ಅಲೆಯಲ್ಲಿ ಹೆಚ್ಚು ಸೋಂಕಿತರಾಗಿರುವವರು ಸಣ್ಣ ವಯಸ್ಸಿನವರೆ. ಇವರುಗಳು ಆಯಾ ಕುಟುಂಬಗಳ ದುಡಿಮೆಗೆ ಜೀವನಾಧಾರವಾಗಿದ್ದಾರೆ. ಇಂತಹ ಯುವಕರು ಮರಣ ಹೊಂದಿದರೆ ಇಡೀ ಕುಟುಂಬದ ಬದುಕು ಸಂಪೂರ್ಣ ದುರಂತವಾಗುತ್ತದೆ ಮತ್ತು ದುರಂತಕ್ಕೆ ಸಿಲುಕಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ತಜ್ಞ ವೈದ್ಯರ ಪ್ರಕಾರ ವರದಿಯಾಗುತ್ತಿರುವ ಪ್ರಕರಣಗಳಿಗಿಂತ ಕನಿಷ್ಟ ೫ ಪಟ್ಟು ಹೆಚ್ಚು ಜನ ಸೋಂಕಿತರಾಗುತ್ತಿದ್ದಾರೆ. ರಾಜ್ಯದಲ್ಲಿ ೩೫ ರಿಂದ ೪೦ ಸಾವಿರ ಜನ ಸೋಂಕಿಗೆ ತುತ್ತಾಗಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಕನಿಷ್ಠ ೨ ಲಕ್ಷ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದೇ ಇದರ ಅರ್ಥ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸೋಂಕಿತರು ಹೆಚ್ಚುತ್ತಿದ್ದಾರೆ. ೧೦ ಸಾವಿರ ವೆಂಟಿಲೇಟರ್ ಅಗತ್ಯ ಇರುತ್ತದೆ. ಒಬ್ಬ ರೋಗಿ ೧೦ ದಿನ ಐಸಿಯುನಲ್ಲಿ ಉಳಿಯುತ್ತಾನೆ ಎಂದುಕೊಂಡರೆ ೧೦ ದಿನಕ್ಕೆ ೧ ಲಕ್ಷ ವೆಂಟಿಲೇಟರ್ ಬೇಕಾಗುತ್ತದೆ. ಆದರೆ ರಾಜ್ಯದಲ್ಲಿ ೧೦ ಸಾವಿರ ಐಸಿಯೂ ಇಲ್ಲ, ಬೆಡ್ಡೂ ಇಲ್ಲ. ಐಸಿಯು ಬೆಡ್‌ಗಳು ಇರುವುದು ೯೫೨ ಮಾತ್ರ. ಅದರಲ್ಲಿ ವೆಂಟಿಲೇಟರ್ ಸೌಲಭ್ಯಗಳಿರುವ ಬೆಡ್‌ಗಳ ಸಂಖ್ಯೆ ಕೇವಲ ೪೩೪. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳು ಮರಣ ಹೊಂದಿದರೆ ಇದಕ್ಕೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದ ಜನರ ಸಂಕಷ್ಟಗಳನ್ನು ನೋಡಲಾಗುತ್ತಿಲ್ಲ. ಆಕ್ಸಿಜನ್ ಕೊರತೆಯಿದೆ. ರಮಿಡಿಸಿವಿರ್ ಔಷಧಿಯೂ ಸಿಗುತ್ತಿಲ್ಲ. ಜನತೆಯಿಂದ ಶವಸಂಸ್ಕಾರವನ್ನೂ ಮಾಡಲಾಗದ ಪರಿಸ್ಥಿತಿಯನ್ನು ನಿರ್ಮಿಸಿದ್ದೀರಿ. ಇಂತಹ ಸಂದರ್ಭದಲ್ಲಿ ನಾಗರಿಕರ ಸರ್ಕಾರವೊಂದು ನಡೆದುಕೊಳ್ಳಬೇಕಾದ ರೀತಿ ಇದೇನಾ ಎಂದಿರುವ ಅವರು, ಸರ್ಕಾರ ತನ್ನೆಲ್ಲಾ ಶಕ್ತಿಯನ್ನು ಬಳಸಿ ಜನರ ರಕ್ಷಣೆಗೆ ನಿಲ್ಲಬೇಕು. ಆಸ್ಪತ್ರೆಗಳಲ್ಲಿ ಈಗಿರುವ ಹಾಸಿಗೆಗಳ ಸೌಲಭ್ಯವನ್ನು ೫೦ ಪಟ್ಟು ಹೆಚ್ಚಿಸಬೇಕು. ಅಗತ್ಯ ಬಿದ್ದರೆ ಶಾಲಾ-ಕಾಲೇಜುಗಳು, ಹಾಸ್ಟೆಲ್, ಹೋಟೆಲ್‌ಗಳು, ಕಲ್ಯಾಣ ಮಂಟಪ, ಸಮುದಾಯ ಭವನ ಮುಂತಾದ ಕಡೆ ತಾತ್ಕಾಲಿಕ ಹಾಸಿಗೆಗಳ ವ್ಯವಸ್ಥೆ ಮಾಡಿ ಸೋಂಕಿತರನ್ನು ನೋಡಿಕೊಳ್ಳಲು ತಜ್ಞರ ಜತೆಗೆ ವೈದ್ಯಕೀಯ ವ್ಯಾಸಂಗದ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳನ್ನು, ದಾದಿಯರನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ವೆಂಟಿಲೇಟರ್ ವ್ಯವಸ್ಥೆ ಇರುವ ಬೆಡ್‌ಗಳನ್ನು ೪೦ ಪಟ್ಟು ಹೆಚ್ಚಿಸಬೇಕು. ದೇಶದಲ್ಲಿ ಇದು ಲಭ್ಯವಿಲ್ಲದಿದ್ದರೆ ವಿದೇಶದಿಂದ ಆಮದು ಮಾಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿ, ರಮಿಡಿಸಿವಿರ್ ಔಷಧಿಯನ್ನು ತರಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಪ್ರತಿದಿನ ಎಷ್ಟು ಹಾಸಿಗೆಗಳನ್ನು ಹೆಚ್ಚಿಸಲಾಯಿತು. ಎಷ್ಟು ಐಸಿಯುಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲದರ ಬಗ್ಗೆಯೂ ಮಾಹಿತಿ ನೀಡಬೇಕು. ಎಲ್ಲ ಜಿಲ್ಲೆಗಳಲ್ಲೂ ಪರಿಸ್ಥಿತಿ ಕೆಟ್ಟದಿದೆ. ಕೂಡಲೇ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡು ಜನರ ಜೀವ ಉಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೇಶದಲ್ಲಿ ಕೊರೊನಾ ಔಷಧಿಗೆ ದರ ನಿಗದಿ ಮಾಡಿರುವುದು ಸರಿಯಲ್ಲ. ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.