ಸರ್ಕಾರದ ನಿಯಮ ಪಾಲಿಸಲು ಮನವಿ

ಬ್ಯಾಡಗಿ, ಮೇ 22: ಕೊರೊನಾ ಎರಡನೇ ಹಂತದ ಅಲೆಯು ತೀವ್ರವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿ ಸರಕಾರದ ನೀತಿ, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅದರ ನಿಯಂತ್ರಣಕ್ಕೆ ಮುಂದಾಗಬೇಕೆಂದು ಗ್ರಾ.ಪಂ. ಅಧ್ಯಕ್ಷ ಮಲ್ಲಪ್ಪ ಬಣಕಾರ ಮನವಿ ಮಾಡಿದರು.
ತಾಲೂಕಿನ ಮಾಸಣಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗುಮ್ಮನಹಳ್ಳಿ, ಅಂಗರಗಟ್ಟಿ ಹಾಗೂ ಮಾಸಣಗಿ ಗ್ರಾಮಗಳಲ್ಲಿ ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಗ್ರಾಪಂ ವತಿಯಿಂದ ಕೈಗೊಂಡಿರುವ ಸ್ಯಾನಿಟೇಷನ್ ಸಿಂಪರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪಂಚಾಯತಿಯ ವ್ಯಾಪ್ತಿಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಸ್ಯಾನಿಟೇಷನ್ ಮಾಡಲು ಕ್ರಮ ವಹಿಸಿದ್ದು, ಆದಷ್ಟು ಜನರು ಸರಕಾರದ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ಕೊರೊನಾ ಮುಕ್ತ ಮಾಡಲು ಸಾಧ್ಯವೆಂದು ತಿಳಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ಬಣಕಾರ ಮಾತನಾಡಿ, ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೊರೋನಾ ವೈರಸ್ ತಡೆಗಟ್ಟುವ ಮೂಲಕ ತಮ್ಮ ಆರೋಗ್ಯದ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವಕೀಲ ಬಸವರಾಜ ಬನ್ನಿಹಟ್ಟಿ, ಸೋಮಪ್ಪ ಕಳಕನವರ, ಮುಖಂಡರಾದ ಮಲಕಪ್ಪ ಮುಳಗುಂದ, ಕಾರ್ಯದರ್ಶಿ ವೀರಭದ್ರಪ್ಪ ಡಮ್ಮನಾಳ, ಸಿಬ್ಬಂದಿಗಳಾದ ಗಿಡ್ಡಣ್ಣನವರ, ಮಂಜು ಬಿಲ್ಲಣ್ಣನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.