ಸರ್ಕಾರದ ನಿಯಮಗಳನ್ನು ಪಾಲಿಸಲು ಡಿಸಿ ಆದೇಶ

ಚಾಮರಾಜನಗರ ಏ.19- ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಹೆಚ್ಚಿನ ಮುಂಜಾಗ್ರತೆ ವಹಿಸಲಾಗುತ್ತಿದ್ದು ಜಿಲ್ಲಾ ವ್ಯಾಪ್ತಿಯಲ್ಲಿ ಮದುವೆ, ಸಮಾರಂಭ, ರಾಜಕೀಯ, ಧಾರ್ಮಿಕ ಆಚರಣೆ, ಶವ ಸಂಸ್ಕಾರ ಇನ್ನಿತರ ಸಂಬಂಧ ಏಪ್ರಿಲ್ 16 ರಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶಿಸಿದ್ದಾರೆ.
ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ ಜಿಲ್ಲಾದ್ಯಂತ ಸಾರ್ವಜನಿಕ ಸಮಾರಂಭ, ಆಚರ ಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆ ಸಂಬಂಧ ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಸಮಾರಂಭಗಳು, ಆಚರಣೆ ಕಾರ್ಯಕ್ರಮಗಳ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ವ್ಯಕ್ತಿ ನಡುವೆ 3.25 ಸ್ಕ್ವೇರ್ ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ತೆರೆದ ಪ್ರದೇಶಗಳಲ್ಲಿ ಮದುವೆ ಮಾಡುವ ಸಂದರ್ಭದಲ್ಲಿ 200 ಜನರು ಮೀರದಂತೆ ಇರಬೇಕಿದೆ. ಕಲ್ಯಾಣ ಮಂಟಪ, ಸಭಾಂಗಣ, ಹಾಲ್‍ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ ಮದುವೆ ಮಾಡುವ ಸಂದರ್ಭದಲ್ಲಿ 100 ಜನರು ಮೀರುವಂತಿಲ್ಲ. ಜನ್ಮದಿನ ಹಾಗೂ ಇತರೆ ಆಚರಣೆಗಳ ಸಂದರ್ಭದಲ್ಲಿ ತೆರೆದ ಪ್ರದೇಶವಾಗಿದ್ದಲ್ಲಿ 50 ಜನ ಮೀರುವಂತಿಲ್ಲ. ಸಭಾಂಗಣ, ಹಾಲ್‍ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಾಗಿದ್ದಲ್ಲಿ 25 ಜನರು ಮೀರುವಂತಿಲ್ಲ.
ನಿಧನ, ಶವಸಂಸ್ಕಾರ ಸಂದರ್ಭದಲ್ಲಿ ತೆರೆದ ಪ್ರದೇಶವಾಗಿದ್ದಲ್ಲಿ 50 ಜನರು ಮೀರದಂತೆ ಭಾಗವಹಿಸಲು ಅವಕಾಶವಿದೆ. ಸಭಾಂಗಣ, ಹಾಲ್‍ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಾಗಿದ್ದಲ್ಲಿ 25 ಜನರು ಮೀರುವಂತಿಲ್ಲ. ಅಂತ್ಯಕ್ರಿಯೆಯಲ್ಲಿ 25 ಜನರು ಮೀರದಂತೆ ಭಾಗವಹಿಸಬೇಕಿದೆ. ಇತರೆ ಸಮಾರಂಭಗಳಾಗಿದ್ದಲ್ಲಿ ಹಾಲ್‍ನ ವಿಸ್ತೀರ್ಣಕ್ಕೆ ಅನುಗುಣವಾಗಿ 50 ಜನರು ಮೀರದಂತೆ ಪಾಲ್ಗೊಳ್ಳಲು ಅವಕಾಶವಿರುತ್ತದೆ. ತೆರೆದ ಪ್ರದೇಶಗಳಲ್ಲಿ ನಡೆಸಲಾಗುವ ರಾಜಕೀಯ ಸಮಾರಂಭ ಆಚರಣೆಗಳಿಗೆ 200 ಜನರು ಮೀರ ದಂತೆ ಭಾಗವಹಿಸಲು ಮಾತ್ರ ಅವಕಾಶವಿದೆ. ಧಾರ್ಮಿಕ ಸಮಾರಂಭ, ಆಚರಣೆಗಳನ್ನು ನಿಷೇಧಿಸಲಾಗಿದೆ.
ಸದರಿ ಸಂದರ್ಭಗಳಲ್ಲಿ ಜನರು ಕಡ್ಡಾಯವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಬಂಧ ಪಟ್ಟ ಇಲಾಖೆಗಳು ಹೊರಡಿಸಿರುವ ಪ್ರಮಾಣಿತ ಕಾರ್ಯ ವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಭಾಂಗಣ, ಕಲ್ಯಾಣ ಮಂಟಪ, ಸಿನಿಮಾ ಮಂದಿರ, ಹಾಲ್‍ಗಳು ಮತ್ತು ಆಚರಣೆಗಾಗಿ ಜನ ಸೇರುವ ಇನ್ನಿತರ ಪ್ರದೇಶಗಳ ಉಸ್ತುವಾರಿ ಹೊಂದಿರುವವರು ಕಡ್ಡಾಯವಾಗಿ ಸ್ಯಾನಿಟೇಜೇಷನ್ ಕ್ರಮಗಳನ್ನು ಅನುಸರಿಸಬೇಕು.
ಆದೇಶ ಪಾಲನೆಯಲ್ಲಿ ಲೋಪವೆಸಗುವವರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ಹಾಗೂ ಭಾರತೀಯ ದಂಡ ಸಂಹಿತೆ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಅನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.