ಸರ್ಕಾರದ ನಡೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಸೆ.21:- ರಾಜ್ಯ ಸರ್ಕಾರ ರೈತರ ಹಿತ ಕಾಯುವ ಹೇಳಿಕೆ ನೀಡುತ್ತಾ ತಮಿಳುನಾಡಿಗೆ ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನಿರಂತರ ನೀರು ಹರಿಸುತ್ತಿರುವ ನಿಲುವನ್ನು ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘ,ದಲಿತ ಸಂಘರ್ಷ ಸಮಿತಿ ಮತ್ತು ತಾಲೂಕು ನಾಗರೀಕ ವೇದಿಕೆಗಳು ಸಭೆ ಸೇರಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಕಾವೇರಿ -ಕಬಿನಿ ಕೊಳ್ಳದ ರೈತರಿಗೆ ಆಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಲಾಯಿತು.ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸರ್ಕಾರದ ನಡೆಯನ್ನು ಖಂಡಿಸಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಸರ್ಕಾರ ಕೆ. ಆರ್.ಎಸ್ -ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು. ನೀರು ಹರಿಸುತ್ತಿರುವುದನ್ನು ನಿಲ್ಲಿಸದಿದ್ದರೆ ಸರ್ಕಾರದ ವಿರುದ್ಧ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಬಿನಿ -ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ನೀರು ಕೊಡದೆ ತಮಿಳುನಾಡಿಗೆ ನೀರು ಹರಿಸಿ ರೈತರನ್ನು ಬಲಿ ಪಡೆಯುತ್ತಿರುವ ರಾಜ್ಯ ಸರ್ಕಾರವು ಕೂಡಲೇ ಈ ಭಾಗದ ರೈತರ ಪ್ರತಿ ಎಕರೆಗೆ 25,000 ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಅಗ್ರಹಿಸಿದರು.
ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಜೊತೆ ನಿಕಟ ಬಾಂಧವ್ಯ ಹೊಂದಿರುವ ರಾಜ್ಯ ಸರ್ಕಾರ ರೈತರ ವಿಚಾರದಲ್ಲಿ ಚೆಲ್ಲಾಟ ಆಡುತ್ತಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಇಚ್ಛಾಸಕ್ತಿ ಕೊರತೆಯಿಂದ ರಾಜ್ಯದ ರೈತರು,ಜನಸಾಮಾನ್ಯರು ತೊಂದರೆಗೆ ಒಳಗಾಗುತ್ತಿದ್ದಾರೆ.ಹಾಗಾಗಿ ಕಾವೇರಿ ನದಿ ಪ್ರಾಧಿಕಾರ ಹಾಗೂ ನೀರು ನಿರ್ವಹಣಾ ಪ್ರಾಧಿಕಾರ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು.ಈ ಪ್ರಾಧಿಕಾರಕ್ಕೆ ಕಾವೇರಿ ಅಚ್ಚುಕಟ್ಟು ಭಾಗವನ್ನೊಳಗೊಂಡ ಎಲ್ಲ ರಾಜ್ಯಗಳ ನೀರಾವರಿ ಪರಿಣಿತರು ಮತ್ತು ಆಯ್ದ ರೈತರನ್ನು ಒಳಗೊಂಡಂತೆ ಸಮಿತಿ ರಚನೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ತಾಲೂಕು ನಾಗರೀಕ ವೇದಿಕೆಯ ಕೆ.ಎನ್ ಪ್ರಭುಸ್ವಾಮಿ ಮಾತನಾಡಿ, ಸರ್ಕಾರ ರೈತರ ಹಿತ ಕಾಯುವ ದೃಷ್ಠಿಯಿಂದ ಯಾವುದೇ ಮರ್ಜಿಗೆ ಒಳಗಾಗದೆ ಸಮಿತಿಯ ಮುಂದೆ ತನ್ನ ನಿಲುವು ಸ್ಪಷ್ಟಪಡಿಸಬೇಕು.ಕಾವೇರಿ ಜಲಾಶಯದ ವಾಸ್ತವ ಸ್ಥಿತಿಯನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಬೇಕು.ಸರ್ಕಾರ ಪ್ರಾಧಿಕಾರ ನಿರ್ದೇಶನದಂತೆ ನೀರು ಬಿಟ್ಟು ನಂತರ ತಕರಾರು ಸಲ್ಲಿಸಬಹುದೆನೋ ಎಂದು ವ್ಯಂಗ್ಯವಾಡಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬನ್ನಳ್ಳಿಹುಂಡಿ ಸೋಮಣ್ಣ,ತಾಲೂಕು ಸಂಚಾಲಕ ಯಡದೊರೆ ಮಹದೇವಯ್ಯ,ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್,ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ, ಕಾರ್ಯದರ್ಶಿ ಪ್ರಸಾದ್ ನಾಯಕ್,ಅಪ್ಪಣ್ಣ ಸಿದ್ದರಾಜು,ಪರಶಿವಮೂರ್ತಿ,ಪ್ರದೀಪ್ ಬೆಳಕು ಸಂಸ್ಥೆಯ ಅರವಿಂದ, ಚಂದ್ರಶೇಖರ್, ಹ್ಯಾಕನೂರು ನಿಂಗರಾಜು ಇತರರು ಹಾಜರಿದ್ದರು.