ಸರ್ಕಾರದ ನಡೆ ಖಂಡಿಸಿ ಏಕಾಂಗಿ ಪ್ರತಿಭಟನೆ

ಮೈಸೂರು,ಏ.27:- ಕೋವಿಡ್ ಸೋಂಕಿತರಿಗೆ ಬೆಡ್ ಮತ್ತು ಆಕ್ಸಿಜನ್ ವ್ಯವಸ್ಥೆ ಮಾಡದ ಸರ್ಕಾರದ ಅಮಾನವೀಯ ನಡೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಏಕಾಂಗಿ ಪ್ರತಿಭಟನೆ ನಡೆಸಿದರು.
ಚಾಮುಂಡಿಬೆಟ್ಟದ ಪಾದಕ್ಕೆ ಹೋಗುವ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಅವರು ತಮ್ಮ ಆಡಳಿತದ ಕೊನೆಯ ಅವಧಿ ಎಂದು ಅರಿತಿರುವ ಸಿಎಂ ಯಡಿಯೂರಪ್ಪನವರು ಯಾಕೋ ಅಕ್ಷರಶಃ ಕ್ರೂರಿಯಂತೆ ಜಡವಾಗಿಬಿಟ್ಟಿದ್ದಾರೆ.
ಕೊರೋನಾ ದಾಳಿಯಿಂದ ಜರ್ಜರಿತವಾಗಿರುವ ಜನಸಾಮಾನ್ಯರ ಬದುಕನ್ನು ಕಟ್ಟಿಕೊಡಲಾಗಲಿ, ಕೊರೋನಾ ವಿರುದ್ಧ ಅವಶ್ಯಕ ಕ್ರಮ ಕೈಗೊಳ್ಳಲಾಗಲಿ ಯಾವುದೇ ಪ್ರಯತ್ನ ಮಾಡದೇ ವೃಥಾ ಕಾಲಹರಣ ಮಾಡುತ್ತ ಸ್ಮಶಾನದಲ್ಲಿ ಶವಗಳ ಸಂಖ್ಯೆಗಳನ್ನು ಹೆಚ್ಚಿಸುತ್ತಿರುವ ಯಡಿಯೂರಪ್ಪನವರ ಸರ್ಕಾರ ಸತ್ತು ಹೋಗಿದೆಯೇ ಎಂದು ಪ್ರಶ್ನಿಸಿದರು.
ಸರ್ಕಾರ ಎಚ್ಚೆತ್ತು ಜನರ ಸಂಕಷ್ಟಗಳಿಗೆ ಧಾವಿಸಬೇಕು. ರಾಜ್ಯ ಸರ್ಕಾರ ಮಾನವೀಯತೆಯನ್ನು ಮರೆತಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಕೊರೋನಾ ರೋಗಿಗಳಿಗೆ ಬೆಡ್ ಮತ್ತು ಆಮ್ಲಜನಕ ನೀಡಿ ಅವರ ಜೀವ ಉಳಿಸಿ ಎಂದು ಒತ್ತಾಯಿಸಿದರು. ನಿಮ್ಮ ಸರ್ಕಾರ ಬರಿ ಮಾತಿನಲ್ಲಿ ಸೋಂಕಿತರಿಗೆ ಬೆಡ್ ಮತ್ತು ಆಕ್ಸಿಜನ್ ಕೊರತೆ ಇಲ್ಲ ಎಂದು ಹೇಳುತ್ತಿದೆ.
ಆದರೆ ವಾಸ್ತವದಲ್ಲಿ ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ. ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಶುಲ್ಕ ತೆರುವ ಶಕ್ತಿ ಜನರಿಗಿಲ್ಲ. ಇದು ಬರಿ ಸುಳ್ಳಿನ ಸರ್ಕಾರ. ಸರ್ಕಾರ ಈ ಕೂಡಲೇ ಎಚ್ಚೆತ್ತು ಸೋಂಕಿತರ, ಬಡವರ ಸಹಾಯಕ್ಕೆ ಮುಂದಾಗಲೆಂದು ಒತ್ತಾಯಿಸಿದರು.