ಸರ್ಕಾರದ ಧಮನಕಾರಿ ನೀತಿಗಳಿಂದಕಾರ್ಮಿಕ ವರ್ಗದ ಅಸ್ತಿತ್ವಕ್ಕೆ ಧಕ್ಕೆ’  


ಉಡುಪಿ, ನ.೭- ದೇಶದ ಅಸಂಖ್ಯಾತ ಜನಸಾಮಾನ್ಯರು ಮತ್ತು ಕಾರ್ಮಿಕ ವರ್ಗವು ಕೇವಲ ಚುನಾವಣೆಗಳಲ್ಲಿ ಮತ ನೀಡುವ ಮಾಧ್ಯಮದಂತೆ ಸೀಮಿತಗೊಳಿಸಿ, ಅವರ ಸಂವಿಧಾನಬದ್ಧ ಹಕ್ಕುಗಳನ್ನು ನಿರಾಕರಿಸಿ, ದೇಶದ ಬೆರಳೆಣಿಕೆಯಷ್ಟಿರುವ ಕಾರ್ಪೊರೇಟ್ ದೊರೆಗಳನ್ನು ಸಾಕಷ್ಟು ರಿಯಾಯಿತಿಯೊಂದಿಗೆ ಬೆಳೆಸಿ ಅವರೇ ದೇಶದ ನಿಜವಾದ ಸಂಪತ್ತು ಸೃಷ್ಟಿಸುವವರು ಎಂಬುದಾಗಿ ಸರಕಾರ ಪ್ರಚಾರ ಮಾಡುತ್ತಿದೆ ಎಂದು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ವಿ.ಎನ್.ಎಸ್.ರವೀಂದ್ರನಾಥ್ ಆರೋಪಿಸಿದ್ದಾರೆ.
ಉಡುಪಿ ಎಲ್.ಐ.ಸಿ. ಎಂಪ್ಲಾಯಿಸ್ ಕೋ-ಆಪರೇಟಿವ್ ಬ್ಯಾಂಕಿನ ವಜ್ರ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಲಾದ ವಿಮಾ ನೌಕರರ ಸಂಘ ಉಡುಪಿ ವಿಭಾಗದ ೬೪ನೇ ವಿಭಾಗೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸರಕಾರದ ಇಂದಿನ ಧಮನಕಾರಿ ನೀತಿಗಳು ಕಾರ್ಮಿಕ ವರ್ಗದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಇದು ದೇಶದ ಪ್ರಜಾತಂತ್ರದ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ನೀತಿಯಾಗಿದೆ. ಪ್ರಪಂಚದ ಹಸಿವಿನ ಸೂಚ್ಯಂಕದಲ್ಲಿ ೧೨೦ ಬಡರಾಷ್ಟಗಳ ಪೈಕಿ ಭಾರತವು ೧೦೭ನೇ ಸ್ಥಾನದಲ್ಲಿದೆ. ಅಸಮಾನತೆಯ ಸೂಚ್ಯಾಂಕದಲ್ಲಿ ೧೬೦ರಲ್ಲಿ ೧೨೩ನೇ ಸ್ಥಾನ ಮತ್ತು ದೇಶದ ನಿರುದ್ಯೋಗದ ಪರಿಸ್ಥಿತಿಯು ಶೇ.೭.೮ ಸರಾಸರಿಯನ್ನು ಮೀರಿದೆ. ಅಸಮಾನತೆಯನ್ನು ಹೋಗಲಾಡಿಸಿ ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಆತ್ಮನಿರ್ಭರ ಭಾರತದ ಹೆಸರಲ್ಲಿ ಇಂದಿನ ಸರಕಾರವು ಲಾಭ ಗಳಿಸುತ್ತಿರುವ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳನ್ನು ಕಾರ್ಪೋರೇಟ್ ವಲಯಕ್ಕೆ ಹಸ್ತಾಂತರಿಲಾಗಿದೆ ಎಂದರು. ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಜೊತೆ ಕಾರ್ಯದರ್ಶಿ ಜೆ.ಸುರೇಶ್ ಅವರು ಮಾತನಾಡಿ, ಕೇಂದ್ರ ಸರಕಾರದ ಸುಲಿಗೆಕೋರ ನೀತಿ ಗಳಿಂದಾಗಿ ಜನರು ಭ್ರಮನಿರಸನರಾಗಿದ್ದಾರೆ. ಭಾರತೀಯರ ಜೀವಕ್ಕೆ ಬೆಲೆಯೇ ಇಲ್ಲದ ಈ ಪರಿಸ್ಥಿತಿಯಲ್ಲಿ ಜನರು ಈಗ ತಕ್ಕ ಮಟ್ಟಿಗೆ ಎಚ್ಚೆತ್ತುಕೊಂಡಿದ್ದಾರೆ. ತನ್ನ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಲು ಈ ಸರಕಾರವು ಸಂವಿಧಾನದ ಎಲ್ಲಾ ಅಂಗಗಳನ್ನು ವ್ಯವಸ್ಥಿತವಾಗಿ ನಿರ್ನಾಮಗೊಳಿಸಲು ಹೊರಟಿದೆ.  ಯಾವುದೇ ಗೊತ್ತುಗುರಿ ಇಲ್ಲದ ಆರ್ಥಿಕ ನೀತಿಗಳು ಮತ್ತು ಜನರನ್ನು ದಿಕ್ಕು ತಪ್ಪಿಸುವ ಸಂವಿಧಾನ ವಿರೋಧಿ ನೀತಿಗಳು ದೇಶವನ್ನು ಅಧಃಪತನದತ್ತ ಒಯ್ಯು ತ್ತಿದೆ ಎಂದರು. ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಜೊತೆ ಕಾರ್ಯದರ್ಶಿ ಜಿ.ತಿರುಪತಯ್ಯ ಮಾತನಾಡಿ, ವಿಮಾ ಕ್ಷೇತ್ರದ ಐ.ಆರ್.ಡಿ.ಎ ಪ್ರಸ್ತಾವಿಸಿದ ಸುಧಾರಣಾ ನೀತಿಗಳು ದೇಶದ ಖಾಸಗಿ ವಲಯದ ವಿಮಾ ಸಂಸ್ಥೆಗಳ ಹಿತಾಸಕ್ತಿಗೆ ಪೂರಕವಾಗಿದ್ದು ಇದರಿಂದಾಗಿ ಸಾರ್ವಜನಿಕ ವಲಯದ ಎಲ್‌ಐಸಿ ಯ ಅಸ್ತಿತ್ವಕ್ಕೆ ಮಾರಕವಾಗಲಿದೆ. ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆಯ ಜಾಗೃತಿಯು ಮುಂದಿನ ಹೋರಾಟಗಳಲ್ಲಿ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು. ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯ ಖಜಾಂಚಿ ಶಶಿಧರ ಗೊಲ್ಲ ಮಾತನಾಡಿದರು. ಅಧ್ಯಕ್ಷತೆಯನ್ನು  ಸಂಘದ ಅಧ್ಯಕ್ಷ ಕೆ. ವಿಶ್ವನಾಥ್ ವಹಿಸಿದ್ದರು. ಸಭೆಯಲ್ಲಿ ವಿಮಾ ಪಿಂಚಣಿದಾರರ ಸಂಘದ ಜತೆ ಕಾರ್ಯದರ್ಶಿ ವಿಠಲ ಮೂರ್ತಿ ಆಚಾರ್ಯ, ಎಲ್‌ಐಸಿ ಅಧಿಕಾರಿಗಳ ಸಂಘದ ಉಡುಪಿ ವಿಭಾಗದ ಅಧ್ಯಕ್ಷ ಎಂ.ಆರ್.ಸಾಮಗ., ಎಲ್‌ಐಸಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಮುಂದಾಳು ಮಂಜುನಾಥ ಹೆಬ್ಬಾರ್, ವಿಮಾ ನೌಕರರ ಸಂಘದ ಮಹಿಳಾ ಸಂಚಾಲಕಿ ನಿರ್ಮಲ ಉಪಸ್ಥಿತರಿದ್ದರು.