ಸರ್ಕಾರದ ಜಯಂತಿ ನಿರ್ಧಾರದಿಂದ ಓಬವ್ವರ ಸಾಹಸ ಹೆಚ್ಚು ಪ್ರಚಾರಕ್ಕೆ ಸಹಕಾರಿ – ಎನ್ ವೈ ಜಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ನ.13 :- ವೀರವನಿತೆ ಒನಕೆ ಓಬವ್ವ  ಚಿತ್ರದುರ್ಗ ಕೋಟೆ ರಕ್ಷಣೆಯಲ್ಲಿ ಮಾಡಿದ ಸಾಹಸ ಪರಾಕ್ರಮದ ಬಗ್ಗೆ ಹೆಚ್ಚು ಪ್ರಚಾರವಾಗಿರಲಿಲ್ಲ  ಈಗ ಸರ್ಕಾರ  ಓಬವ್ವರ  ಜಯಂತಿ ಆಚರಣೆ ಮಾಡಲು ಮುಂದಾಗಿದ್ದರಿಂದ ಅವರ  ಸಾಹಸಗಾಥೆ ನಾಡಿನಾದ್ಯಾಂತ ತಿಳಿಯುತ್ತಿದ್ದು ಅದು ಇಡೀ ವಿಶ್ವಾದ್ಯಂತ ಪಸರಿಸಲಿ ಎಂದು ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ತಿಳಿಸುತ್ತಾ ಸರ್ಕಾರದ ಓಬವ್ವರ ಜಯಂತಿ ಆಚರಣೆಯ ಉತ್ತಮ ನಿರ್ಧಾರವನ್ನು ಶ್ಲಾಘಿಸಿದರು.
ಅವರು ಮೊನ್ನೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಾಸಶ್ರೇಷ್ಠ ಕನಕದಾಸ ಮತ್ತು ವೀರವನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ತಾಲೂಕು ಆಡಳಿತದಿಂದ ಶುಕ್ರವಾರ  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಕನಕದಾಸರು ಹಾಗೂ ಒನಕೆ ಓಬವ್ವರ ಎರಡು ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ನಂತರ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡುತ್ತ  ಒನಕೆ ಓಬವ್ವ ಅವರ ತವರೂರು ಆಗಿರುವ ಗುಡೇಕೋಟೆ ಪರಿಸರವು ಈಗ ವಿಶ್ವದ ಎರಡನೇ ಕರಡಿಧಾಮವನ್ನು ಹೊಂದಿದ ಸ್ಥಳವಾಗಿದ್ದು, ಇಂಥ ಐತಿಹಾಸಿಕ ಸ್ಥಳವಾದ ಕೂಡ್ಲಿಗಿ ಮತ್ತು ಕೂಡ್ಲಿಗಿ ತಾಲೂಕು ಕೇಂದ್ರದಲ್ಲಿ ವೀರವನಿತೆ ಒನಕೆ ಓಬವ್ವ ಅವರ ಪ್ರತಿಮೆ ಸ್ಥಾಪಿಸುವ ಮೂಲಕ ಅವರ ಹೆಸರಿನ ವೃತ್ತ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರಲ್ಲದೆ, ಭಕ್ತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ದಾಸಶ್ರೇಷ್ಠರು ಎಂದು  ಸ್ಮರಿಸಿದರು.
ತಹಸೀಲ್ದಾರ್ ಟಿ.ಜಗದೀಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನಕದಾಸರ ಕುರಿತು ಬಡೇಲಡುಕು ರಾಮಚಂದ್ರಪ್ಪ ಮತ್ತು ಒನಕೆ ಓಬವ್ವ ಕುರಿತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಜಿ.ಆಂಜನೇಯ ವಿಶೇಷ ಉಪನ್ಯಾಸ ನೀಡಿದರು.
ಛಲವಾದಿ ಮತ್ತು ಕುರುಬ ಸಮುದಾಯದ ಮುಖಂಡರು ಮಾತನಾಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಆದ್ಯಕ್ಷೆ ಶಾರದಾಬಾಯಿ, ಉಪಾಧ್ಯಕ್ಷೆ ಸರಸ್ವತಿ ರಾಘವೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಚಂದ್ರು, ತಾಪಂ ಇಒ ವೈ.ರವಿಕುಮಾರ್, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾದ ಸಿ.ಎ.ಮೋಹನ್, ಕೊಟ್ರೇಶ್, ಕುರುಬರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬೊಪ್ಪಲಾಪುರ, ಕೂಡ್ಲಿಗಿ ಸಿಪಿಐ ವಸಂತ ವಿ.ಅಸೋದೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ ಸೇರಿ ಅನೇಕ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಇದೇ ಸಂದರ್ಭದಲ್ಲಿ ತಾಲೂಕಿನ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗುಡೇಕೋಟೆಯಲ್ಲಿ ಒನಕೆ ಓಬವ್ವ ಉದ್ಯಾನವನ ಮಾಡಿ
ತಾಲೂಕಿನ ಗುಡೇಕೋಟೆಯು ಏಷ್ಯಾದ ಎರಡನೇ ಕರಡಿ ಧಾಮದ ಹೊಂದಿದ ಸ್ಥಳವಾಗಿದೆ. ಇಂಥ ಗುಡೇಕೋಟೆಯು ವೀರವನಿತೆ ಒನಕೆ ಓಬವ್ವ ಅವರ ತವರೂರು. ಹೀಗಾಗಿ, ಗುಡೇಕೋಟೆ ಕರಡಿಧಾಮದ  ಬಳಿ 4 ಎಕರೆ ಜಾಗದಲ್ಲಿ ವೀರವನಿತೆ ಒನಕೆ ಓಬವ್ವ ಅವರ ಉದ್ಯಾನವನ ಮತ್ತು ಪ್ರತಿಮೆ ನಿರ್ಮಿಸಬೇಕೆಂದು ಒತ್ತಾಯಿಸಿ ಶಾಸಕ ಎನ್.ವೈ.ಗೋಪಾಲಕೃಷ್ಣ ಮತ್ತು ತಹಸೀಲ್ದಾರ್ ಅವರಿಗೆ ಛಲವಾದಿ ಮಹಾಸಭಾದಿಂದ ಸಿ.ಎ.ಮೋಹನ್ ಸೇರಿ ಇತರರು ಮನವಿ ಸಲ್ಲಿಸಿದರು.