ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ : ಸಂಸದ.ಜಿ.ಎಂ.ಸಿದ್ದೇಶ್ವರ

 ದಾವಣಗೆರೆ.ಏ.೨೮; ಕೊರೋನಾ ಎರಡನೇ ಅಲೆಯಿಂದಾಗಿ ಇಡೀ ದೇಶವೇ ಆತಂಕದ ಸ್ಥಿತಿಯಲ್ಲಿದೆ, ಇದಕ್ಕೆ ಕರ್ನಾಟಕ ರಾಜ್ಯವೂ ಕೂಡ ಹೊರತಾಗಿಲ್ಲ, ಜನರ ಜೀವವನ್ನು ರಕ್ಷಣೆ ಮಾಡುವ ವಿಷಯವನ್ನು ಪ್ರಥಮ ಆದ್ಯತೆಯನ್ನಾಗಿ ಪರಿಗಣಿಸಿ ರಾಜ್ಯದಲ್ಲಿಯೂ ಕೂಡ ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ರಾಜ್ಯದಲ್ಲಿ 14 ದಿನಗಳ ಕಾಲ ಗರಿಷ್ಟ ಮಟ್ಟದ ಬಿಗಿ ಕ್ರಮಗಳನ್ನು ಜಾರಿಗೊಳಿಸಿದೆ ಆದ್ದರಿಂದ ಜನರು ಮನೆಯಲ್ಲಿ ಸುರಕ್ಷಿತವಾಗಿರ ಬೇಕೆಂದು ಸಂಸದ ಜಿ.ಎಂ ಸಿದ್ದೇಶ್ವರ್ ಮನವಿ ಮಾಡಿದ್ದಾರೆ.ಈ ಸಮಯದಲ್ಲಿ ಸಾರ್ವಜನಿಕರು ಯಾವ ರೀತಿ ವರ್ತಿಸಬೇಕು ಎಂಬುದಕ್ಕೆ ಮಾರ್ಗಸೂಚಿಯನ್ನು ಸಹ ಸರ್ಕಾರ ಬಿಡುಗಡೆ ಮಾಡಿದೆ, ಆದರೆ, ಮುದ್ರಣ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳನ್ನು ಕೆಲವೊಂದು ಸುದ್ದಿಗಳನ್ನು ಗಮನಿಸಿದಾಗ ನಿಜಕ್ಕೂ ಆಶ್ವರ್ಯವುಂಟಾಗುತ್ತದೆ. ಕೆಲವೊಂದು ಗ್ರಾಮಗಳಲ್ಲಿ ಹಬ್ಬ, ತೇರು, ಜಾತ್ರೆಗಳನ್ನು ಆಚರಿಸುವುದು ಕಂಡುಬಂದಿದೆ, ಇಂತಹ ಯಾವುದೇ ತರಹದ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡಿದ್ದೇ ಆದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಪೋಲಿಸ್ ವರಿಷ್ಟಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ, ವಿಷಯ ಹೀಗಿದ್ದಾಗ ಹಳ್ಳಿಗಳಲ್ಲಿ ಜಾತ್ರೆಗಳನ್ನೇನಾದರೂ ಮಾಡಿದ್ದೇ ಆದಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅಡಿ ಖಂಡಿತವಾಗಿಯೂ ಶಿಕ್ಷೆಗೆ ಒಳಗಾಗುತ್ತೀರಿ. ಸುಖಾ ಸುಮ್ಮನೆ ಅಲೆದಾಡಬೇಡಿ, ಅವಶ್ಯವಿದ್ದರಷ್ಟೆ ಮನೆಯಿಂದ ಹೊರಬನ್ನಿ. ಈಗಾಗಲೇ ಆಸ್ಪತ್ರೆಗಳಲ್ಲಿ ಸಾಕಷ್ಟು ಒತ್ತಡ ಇದೆ, ಇಂತಹ ಪರಿಸ್ಥಿತಿಯಲ್ಲಿ ನೀವೂ ಕೂಡ ಸೋಂಕಿತರಾಗಿ ಮತ್ತಷ್ಟು ಒತ್ತಡಕ್ಕೆ ಕಾರಣರಾಗಬೇಡಿ. ಪೋಲಿಸರೊಂದಿಗೆ ಸಹಕರಿಸಿ ಅವರು ಅವರವರ ಜೀವಗಳನ್ನು ಒತ್ತೆಯಿಟ್ಟು ನಿಮ್ಮ ಜೀವ ರಕ್ಷಣೆಗಾಗಿ ಕೆಲಸ ಮಾಡ್ತಾ ಇದಾರೆ, ಇದನ್ನು ಗಮನದಲ್ಲಿಟ್ಟುಕೊಳ್ಳಿ, ಮಾಸ್ಕ್ ಇಲ್ಲದೇ ಹೊರಗೆ ಬರಬೇಡಿ. ಆಮ್ಲಜನಕದ ಮಹತ್ವ ಏನು ಎಂಬುದು ಈಗ ಎಲ್ಲರಿಗೂ ಅರಿವಾಗಿದೆ. ಆಸ್ಪತ್ರೆಗಳಲ್ಲಿ ಆಮ್ಲಜನಕಕ್ಕಾಗಿ ಹೋರಾಟವೇ ನಡೆಯುತ್ತಿದೆ, ಇಂತಹ ಸಮಯದಲ್ಲಿ ಕೋವಿಡ್‌ನಿಂದ ಗುಣಮುಕ್ತರಾದ ಪ್ರತಿಯೊಬ್ಬರು ಆಸ್ಪತ್ರೆಯಲ್ಲಿದ್ದಾಗ ನೀವು ಬಳಸಿದ ಆಮ್ಲಜನಕವನ್ನು ಪ್ರಕೃತಿಗೆ ಮರಳಿಸಬೇಕಾಗಿದೆ, ಆದ್ದರಿಂದ ಪ್ರತಿಯೊಬ್ಬ ಕೋವಿಡ್‌ನಿಂದ ಗುಣಮುಖರಾದ ರೋಗಿಗಳು ಆಸ್ಪತ್ರೆಯಿಂದ ಹೊರಬಂದ ನಂತರ ನಿಮ್ಮ ನಿಮ್ಮ ಗ್ರಾಮಗಳಲ್ಲಿ ನಗರಗಳಲ್ಲಿ ಹತ್ತು ಸಸಿಗಳನ್ನು ನೆಟ್ಟು ಕೃತಾರ್ಥರಾಗಿ. ಇದೊಂದು ನೀವು ಮುಂಬರುವ ಜನಾಂಗಕ್ಕೆ ಮಾಡುವ ಒಂದು ಮಹದುಪಕಾರ.ಏನೇ ಆಗಲಿ ಎಲ್ಲರೂ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಸುರಕ್ಷತೆಯಿಂದಿರಿ ಎಂದು ತಿಳಿಸಿದ್ದಾರೆ.