ಸರ್ಕಾರದ ಕೋವಿಡ್ ನಿರ್ಬಂಧಗಳನ್ನು ನಾಗರಿಕರು ಪಾಲಿಸಿ

ಉಡುಪಿ, ಎ.೫- ಜಿಲ್ಲೆಯ ಜನತೆ ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಶುಕ್ರವಾರ ನೀಡಿರುವ ಹೊಸ ಆದೇಶಗಳನ್ನು, ನಿರ್ಬಂಧಗಳನ್ನು ಸರಿಯಾಗಿ ಪಾಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ವೀಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, ಇದೇ ತಿಂಗಳ ೨೦ರವರೆಗೆ (ಎ.೨೦) ಜಾರಿಯಲ್ಲಿರುವ ಈ ನಿರ್ಬಂಧಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ, ನಮ್ಮ ನಿರ್ಲಕ್ಷದಿಂದ ಲಾಕ್‌ಡೌನ್‌ನಂಥ ಪರಿಸ್ಥಿತಿಯನ್ನು ತಂದುಕೊಳ್ಳದಂತೆ ಮನವಿ ಮಾಡಿಕೊಂಡಿದ್ದಾರೆ. ಮುಂದಿನ ೨-೩ ತಿಂಗಳು ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದ್ದು, ಸರಕಾರದ ನಿಯಮಗಳನ್ನು ಪಾಲಿಸಲು ಎಲ್ಲರ ಸಹಕಾರವನ್ನು ಕೋರುತ್ತಿರುವುದಾಗಿ ತಿಳಿಸಿದರು. ಕೋವಿಡ್ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜರಗಿಸುವಂತೆ ಸರಕಾರ ಹೊಸ ಆದೇಶದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ. ಅದರಂತೆ ಒಂದನೇ ತರಗತಿಯಿಂದ ೯ನೇ ತರಗತಿಯವರೆಗೆ ವಿದ್ಯಾಗಮನವೂ ಸೇರಿದಂತೆ ಯಾವುದೇ ತರಗತಿಗಳನ್ನು ನಡೆಸದಂತೆ ಸೂಚಿಸಿದೆ. ೧೦,೧೧ ಮತ್ತು ೧೨ನೇ ತರಗತಿಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ. ಡಿಗ್ರಿ ಕಾಲೇಜುಗಳಿಗೆ ಪರೀಕ್ಷೆಗಳು ಮಾತ್ರ ನಡೆಯಲಿವೆ. ವೈದ್ಯಕೀಯ ಕಾಲೇಜುಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಕಾಲೇಜುಗಳಲ್ಲಿ ಕ್ಲಾಸ್‌ಗಳನ್ನು ನಡೆಸಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ಬಗ್ಗೆ ತಾವು ಈಗಾಗಲೇ ಡಿಡಿಪಿಐ, ಡಿಡಿಪಿಯು ಹಾಗೂ ಉಳಿದ ಸಂಬಂಧ ಪಟ್ಟವರಿಗೆ ಸೂಚನೆಗಳನ್ನು ನೀಡಿದ್ದು, ಆದೇಶವನ್ನು ಪಾಲಿಸುವಂತೆ ತಿಳಿಸಿರುವುದಾಗಿ ಹೇಳಿದ್ದಾರೆ. ಇನ್ನು ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಅವಕಾಶವಿಲ್ಲ ಎಂದು ಎಲ್ಲರಿಗೂ ಸೂಚನೆಗಳನ್ನು ನೀಡಿದ್ದೇವೆ. ಕೇವಲ ವೈಯಕ್ತಿಕ ಪ್ರಾರ್ಥನೆಯನ್ನು ಹೊರತು ಪಡಿಸಿ ಬೇರೆ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ಜಿಲ್ಲೆಯ ಎಲ್ಲಾ ಜಿಮ್ ಹಾಗೂ ಈಜು ಕೊಳಗಳನ್ನು ಮುಚ್ಚಲು ಈಗಾಗಲೇ ಆದೇಶ ನೀಡಲಾಗಿದೆ. ಯಾವುದೇ ತರದ ರ್ಯಾಲಿಗಳು, ಮುಷ್ಕರ, ಧರಣಿಗೆ ಅವಕಾಶವಿರುವುದಿಲ್ಲ. ಸಾರ್ವಜನಿಕರ ವಾಹನಗಳಲ್ಲಿ ಆಸನ ಇರುವಷ್ಟೇ ಪ್ರಯಾಣಿಕರು ಪ್ರಯಾಣಿಸಲು ಅವಕಾಶ ವಿದೆ. ಈ ಬಗ್ಗೆ ಈಗಾಗಲೇ ಆರ್‌ಟಿಓ ಅವರಿಗೆ ಸ್ಪಷ್ಟ ಆದೇಶ ನೀಡಿದ್ದು, ತಕ್ಷಣವೇ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿ.ಜಗದೀಶ್ ಹೇಳಿದರು. ಸಿನಿಮಾ ಹಾಲ್, ಬಾರ್, ಕ್ಲಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಅವುಗಳ ಸಾಮರ್ಥ್ಯದ ಶೇ.೫೦ರಷ್ಟು ಸೀಟುಗಳನ್ನು ತುಂಬಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೂ ತಿಳಿಸಲಾಗಿದೆ. ಇನ್ನು ಕೋವಿಡ್ ಮುನ್ನೆಚ್ಚರಿಕೆಗಾಗಿ ಸೂಕ್ತ ವರ್ತನೆಗಳಾದ ಕಡ್ಡಾಯ ಮಾಸ್ಕ್ ಧರಿಸುವುದು, ಸುರಕ್ಷತಾ ಅಂತರ ಕಾಪಾಡುವುದು ಹಾಗೂ ಸ್ಯಾನಟೈಸರ್‌ನಿಂದ ಕೈತೊಳೆಯುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ತಿಳಿಸಲಾಗಿದೆ ಎಂದರು. ಅಂಗಡಿ, ಡಿಪಾರ್ಟ್‌ಮೆಂಟಲ್ ಸ್ಟೋರ್, ಶಾಪಿಂಗ್ ಮಾಲ್, ಮಾರ್ಕೆಟ್‌ಗಳಲ್ಲೂ ಕೋವಿಡ್ ಮುನ್ನೆಚ್ಚರಿಕೆಗೆ ಸೂಕ್ತ ವರ್ತನೆಗಳನ್ನು ಕಡ್ಡಾಯ ವಾಗಿ ಪಾಲಿಸುವಂತೆ ತಿಳಿಸಲಾಗಿದ್ದು, ಯಾರು ಇವುಗಳನ್ನು ಪಾಲಿಸುವುದಿಲ್ಲವೋ ಅಥವಾ ಉಲ್ಲಂಘಿಸುತ್ತಾರೋ, ಅಂಥವುಗಳನ್ನು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೂ ಅವುಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆ, ಜಾತ್ರೆ, ಮಹೋತ್ಸವ, ಮೇಳಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸು ವವರ ವಿರುದ್ಧ ದಂಡ ವಿಧಿಸಲು ಈಗಾಗಲೇ ಪ್ರಾರಂಭಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದ ಯಾವುದೇ ವ್ಯಕ್ತಿ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಸರಕಾರದ ಈ ಆದೇಶ ಎ.೨೦ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.