ಸರ್ಕಾರದ ಕೆಲಸ ದೇವರ ಕೆಲಸ, ಅಂದ ಹಾಗೆ ಸರ್ಕಾರದ ಆದೇಶ ದೇವರ ಆದೇಶ, ತಪ್ಪದೇ ಪಾಲಿಸಿ: ಪ್ಯಾಟಿ

ಕಲಬುರ್ಗಿ,ಏ.26: ಮಹಾಮಾರಿ ಕೊರೋನಾಕ್ಕೆ ಇಡೀ ಜಗವೇ ತಲ್ಲಣಿಸುತ್ತಿರುವಾಗ ನಾವು ಭಾರತೀಯರು. ಪ್ರಾಚೀನ ಕಾಲದಿಂದಲೂ ನಾವು ಬೇರೆಯವರಿಗೆ ಧೈರ್ಯ ತುಂಬಿ ಮಾರ್ಗದರ್ಶನ ಮಾಡಿದವರು. ಆದ್ದರಿಂದ ನಂಬಿಗಸ್ಥರಾದ ನಾವು ಸರ್ಕಾರದ ಆದೇಶ ತಪ್ಪದೇ ಪಾಲಿಸಿ ಕೋವಿಡ್-19ನ್ನು ಹತೋಟಿಗೆ ತರೋಣ. ಜನರಲ್ಲಿ ಧೈರ್ಯ ತುಂಬಿಸೋಣ ಎಂದು ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿಯ ಹಿರಿಯ ಮುಖಂಡ ಶಾಮರಾವ್ ಪ್ಯಾಟಿ ಅವರು ಮನವಿ ಮಾಡಿದರು.

ಸಾವು ಸ್ವಾಭಾವಿಕ ಅಂಜುವುದು ಬೇಡ. ಈ ಸಂದಿಗ್ದ ಪರಿಸ್ಥಿತಿಯನ್ನು ಅರಿತುಕೊಂಡು ಕೊರೋನಾ ಓಡಿಸೋಣ. ಸ್ವಚ್ಛತೆಯಿಂದ ಬದುಕೋಣ. ಸರ್ಕಾರದ ಆದೇಶ ಪಾಲಿಸೋಣ. ಅಲ್ಲಮಪ್ರಭುದೇವರು ಹೇಳಿದಂತೆ ಕಂಡು ಕಂಡುದೆಲ್ಲವನ್ನೂ ಕೊಂಡು ಅಟ್ಟಹಾಸದಿ ಮೆರೆವ ಜನಕ್ಕೆ ಕಾಣದ ಜೀವಿಯು ಬಂದು ಜಗವ ತಲ್ಲಣಿಸಿತು ನೋಡಾ ಗುಹೇಶ್ವರಾ ಎಂಬು ವಚನವನ್ನು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಜಾಗೃತಿಯಿಂದ ಜೀವನ ಸಾಗಿಸಿದರೆ ಎಲ್ಲವೂ ಸರಿ ಹೊಂದುವುದು. ಇಲ್ಲದೇ ಇದ್ದರೆ ಆಪತ್ತು ಸಂಭವಿಸುವುದು. ಎಲ್ಲವನ್ನೂ ತಿಳಿದೂ ನಾವು ಮೂರ್ಖರಂತೆ ವರ್ತಿಸುವುದು ಬಿಟ್ಟು ಸ್ವಚ್ಛತೆಯೊಂದಿಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಸೈನಿಟೈಜರ್ ಬಳಸುವುದು ಮುಂತಾದ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಜೀವಕ್ಕೆ ಒಂದು ಬೆಲೆ ಬರುತ್ತದೆ ಎಂದು ಅವರು ಸಲಹೆ ಮಾಡಿದ್ದಾರೆ.

] ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯಕ್ಕೆ ರೆಮ್‍ಡಿಸಿವರ್ ಇಂಜೆಕ್ಷನ್ ಹೆಚ್ಚಿಗೆ ಪೂರೈಕೆ ಮಾಡಿರುವುದು ಸ್ವಾಗತಾರ್ಹ. ನಿರ್ಲಕ್ಷ್ಯ ಮಾಡಿದರೆ ಜೀವಕ್ಕೆ ವಿಪತ್ತು. ಜಾಗೃತಿ ವಹಿಸಿದರೆ ಕೊರೋನಾಕ್ಕೆ ಆಪತ್ತು ಎಂದು ಅವರು ಎಚ್ಚರಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಅವರು ತಿಳಿಸಿದ್ದಾರೆ.