ಸರ್ಕಾರದ ಕೆಟ್ಟ ನೀತಿಯಿಂದ 3500 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ: ಅಂಕುಶ ಗೊಖಲೆ

ಬೀದರ್: ಜ.20:ಸರ್ಕಾರದ ಕೆಟ್ಟ ನೀತಿಯಿಂದ ರಾಜ್ಯದಲ್ಲಿ ಸುಮಾರು 3500 ಸರ್ಕಾರಿ ಶಾಲೆಗಳು ಶಾಶ್ವತವಾಗಿ ಬಂದ್ ಆಗಿದ್ದು, ಬೀದರ್ ಜಿಲ್ಲೆಯಲ್ಲಿ ಈ ವರ್ಷ 31 ಪ್ರಾಥಮಿಕ ಶಾಲೆಗಳು ಮುಚ್ಚಲ್ಪಟ್ಟಿವೆ ಎಂದು ಜನರ ಧ್ವನಿ ಸಂಘಟನೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಅಂಕುಶ ಗೋಖಲೆ ಆರೋಪಿಸಿದರು.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ದೇಶ ಸಧೃಢವಾಗಲು ಹಣ, ಆಸ್ತಿ, ಸಂಪತ್ತು ಅಗತ್ಯವಿಲ್ಲ. ಬದಲಿಗೆ ಗುಣಾತ್ಮಕ ಶಿಕ್ಷಣ ಅಗತ್ಯವಾಗಿದೆ ಎಂದರು.
ಈ ರಾಜ್ಯ ಆಳಿದ ಎಲ್ಲ ಸರ್ಕಾರಗಳು ಖಾಸಗಿಕರಣಕ್ಕೆ ಒತ್ತು ನೀಡಿ ಸರ್ಕಾರಿ ಶಾಲೆಗಳನ್ನು ಕಡೆಗಣಿಸಿದ ಪರಿಣಾಮವೇ ಇಂದು ಖಾಸಗಿಕರಣ ತಲೆ ಎತ್ತುತ್ತಿದೆ. ರಾಜ್ಯದಲ್ಲಿ ಈ ವರ್ಷ 287 ಪ್ರಾಥಮಿಕ ಶಾಲೆಗಳು ಮಕ್ಕಳಿಲ್ಲದೇ ಶುನ್ಯ ಹಾಜರಿ ಇರುವ ಕಾರಣ ಮುಚ್ಚಲ್ಪಟ್ಟಿವೆ. ಕಳೆದ 25 ವರ್ಷಗಳಿಂದಿಚೀಗೆ ಅವು 3500ಕ್ಕೆ ಬಂದು ತಲುಪಿವೆ. ಔರಾದ್ 11, ಬಸವಕಲ್ಯಾಣ 3, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ತವರೂರಿನಲ್ಲಿ 13 ಶಾಲೆಗಳು, ಹುಮನಾಬಾದ್ 3, ಬೀದರ್ 1 ಶಾಲೆ ಮುಚ್ಚಲ್ಪಟ್ಟಿವೆ. ರಾಜ್ಯದಲ್ಲಿ 6,529 ಶಾಲೆಗಳಲ್ಲಿ ಬರೀ ಒಬ್ಬ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಬೀದರ್ ಜಿಲ್ಲೆಯಲ್ಲಿ ಈ ವರ್ಷ ಒಟ್ಟು 169 ಶಾಲೆಗಳಲ್ಲಿ ಬರೀ ಓರ್ವ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಈ ದುಸ್ಥಿತಿ ಒಂದೆಡೆಯಾದರೆ, ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಸುಧಾರಣಾ ಸಮಿತಿ(ಎಸ್.ಡಿ.ಎಮ್.ಸಿ) ಸಮಿತಿಗಳು ರಾಜಕೀಯ ಪಕ್ಷಗಳಂತೆ ವರ್ತಿಸುತ್ತಿವೆ. ಅದಕ್ಕಾಗಿ ಎಸ್.ಡಿ.ಎಮ್.ಸಿ ಸಮಿತಿಗಳನ್ನು ರದ್ದು ಮಾಡಬೇಕು, ಗ್ರಾಮ ಪಂಚಾಯತಿಯಿಂದ ಹಿಡಿದು ಶಾಸಕರು ಹಾಗೂ ಸಂಸದರ ವರೆಗಿನ ಜನಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ 10ನೇ ತರಗತಿವರೆಗೆ ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿಯೇ ವ್ಯಾಸಾಂಗ ಮಾಡಬೇಕೆಂಬ ಕಡ್ಡಾಯ ಶಾಸನ ಜಾರಿ ಮಾಡಬೇಕು, ಕೆಸೆಟ್, ನೀಟ್‍ನಂತಹ ಎಲ್ಲ ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ 10 ಪ್ರತಿಶತದಷ್ಟು ರಿಯಾಯತಿ ನೀಡಬೇಕೆಂಬ ಕಾನೂನು ಜಾರಿಗೆ ತರಬೇಕಾಗಿದೆ ಎಂದು ಗೋಖಲೆ ಹೇಳಿದರು.
ಜನರ ಧ್ವನಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ರಾಜಕುಮಾರ ಶಿಂಧೆ, ಸಂಘಟನೆಯ ಹಿರಿಯರಾದ ತಿಪ್ಪಣ್ಣ ವಾಲಿ, ಪರಮೇಶ್ವರ ಪಾಟೀಲ, ಬಸವಕಲ್ಯಾಣ ತಾಲೂಕಾಧ್ಯಕ್ಷ ಮಾರೂತಿ ಕಾಂಬಳೆ ಪತ್ರಿಕಾ ಗೋಷ್ಟಿಯಲ್ಲಿ ಭಾಗವಹಿಸಿದರು.