ಸರ್ಕಾರದ ಏಕಪಕ್ಷೀಯ ನಿರ್ಧಾರ ಹಿಂಪಡೆಯಲು ಎಐಯುಟಿಯುಸಿ ಆಗ್ರಹ

ಗುರುಮಠಕಲ್:ಜು.22:ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ವಿವಿಧ ಸೌಲಭ್ಯಗಳನ್ನು ಪಡೆಯಲು ಮಂಡಳಿ ನೀಡುವ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಪಡೆಯಲು ಸೇವಾ ಸಿಂಧು ಆನ್ ಲೈನ್ ತಂತ್ರಾಂಶದಡಿಯಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವೇತನ ಚೀಟಿ ಲಗತ್ತಿಸುವುದು ಕಡ್ಡಾಯಗೊಳಿಸಿರುವ ಸರ್ಕಾರದ ಏಕಪಕ್ಷೀಯ ನಿರ್ಧಾರ ಅತ್ಯಂತ ಖಂಡನೀಯ.

ದಿನಾಂಕ 20/07/2023 ಕರ್ನಾಟಕ ಸರ್ಕಾರದ ಕಾರ್ಮಿಕರ ಸಚಿವರಾದ ಶ್ರೀ ಸಂತೋಷ್ ಎಸ್ ಲಾಡ್ ಅವರು, ನಮ್ಮ ಸಂಘವು ಸೇರಿ
ಎಲ್ಲಾ ಕಟ್ಟಡ ಕಾರ್ಮಿಕ ಸಂಘಟನೆಗಳ ಮುಖಂಡರರೊಂದಿಗೆ ಸಭೆ ಕರೆದಿದ್ದರು. ಸಭೆಯಲ್ಲಿ ಕಾರ್ಮಿಕರು ಮಂಡಳಿಗೆ ನೋಂದಣಿ ಮತ್ತು ನವೀಕರಣಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವರ್ಷಕ್ಕೆ ಕನಿಷ್ಠ 90 ದಿನಗಳ ವೇತನ ಚೀಟಿ ಕಡ್ಡಾಯವಾಗಿ ಲಗತ್ತಿಸಬೇಕು ಎಂದು ಪ್ರಸ್ತಾಪಿಸಿದರು.

ಆದರೆ ಸರ್ಕಾರದ ಈ ಪ್ರಸ್ತಾವನೆಗೆ ಎಲ್ಲಾ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರೂ, ಸರ್ಕಾರದ ಏಕಪಕ್ಷೀಯವಾಗಿ ಜಾರಿಮಾಡಿದೆ. ಅಲ್ಲದೇ ಕಟ್ಟಡ ನಿರ್ಮಾಣ ಮಾಲೀಕರಾಗಲಿ ಅಥವಾ ಗುತ್ತಿಗೆದಾರರಾಗಲಿ ಕಾರ್ಮಿಕರಿಗೆ ವೇತನ ಚೀಟಿ ನೀಡುವ ನಿಯಮ ಚಾಲ್ತಿಯಲ್ಲಿಲ್ಲ.
ಸರ್ಕಾರದ ಪ್ರಸ್ತಾವನೆಯಂತೆ ಕಾರ್ಮಿಕರು ವೇತನ ಚೀಟಿ ಗುತ್ತಿಗೆದಾರರ ಬಳಿ ಕೇಳಿದರೆ ಕೆಲಸ ಕಳೆದುಕೊಳ್ಳುವ ಸಂಭವವೇ ಹೆಚ್ಚು. ಇದರಿಂದ ಬಡ ಕಟ್ಟಡ ಕಾರ್ಮಿಕರು ದೈನಂದಿನ ಕೂಲಿ ಜೊತೆಗೆ ಮಂಡಳಿ ಹಾಗೂ ಸರಕಾರ ನೀಡುವ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
ಈ ಎಲ್ಲ ಸಾಧಕ ಬಾಧಕಗಳನ್ನು ಚರ್ಚಿಸದೆ ಕಾರ್ಮಿಕರ ಹಿತವನ್ನು ಗಾಳಿಗೆ ತೂರಿ ಏಕಪಕ್ಷೀಯವಾಗಿ ತೀರ್ಮಾನ ಮಾಡಿ ಆದೇಶ ಹೊರಡಿಸಿರುವುದು ಖಂಡನೀಯ.

ಆದ್ದರಿಂದ ಈ ಆದೇಶವನ್ನು ಹಿಂಪಡೆದು, ಈ ಹಿಂದೆ ಇದ್ದ ನಿಯಮವನ್ನು ಮುಂದುವರಿಸಬೇಕು ಅಲ್ಲದೇ ಕಳೆದ 2 ವರ್ಷಗಳಿಂದ ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಇನ್ನೂ ವರೆಗೂ ಬಂದಿಲ್ಲ.ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಮಂಡಳಿಯ ಸೌಲಭ್ಯಗಳು ನೋಂದಾಯಿತ ಎಲ್ಲ ಕಟ್ಟಡ ಕಾರ್ಮಿಕರಿಗೆ ತಲುಪುವಂತೆ ಮಾಡಬೇಕು ಎಂದು ನಮ್ಮ ಸಂಘಟನೆ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ(ರಿ) ವು ಸರ್ಕಾರವನ್ನು ಒತ್ತಾಯಿಸುತ್ತದೆ