ಸರ್ಕಾರದ ಆದೇಶ, ಮಾರ್ಗಸೂಚಿ ಪಾಲಿಸಲು ಸೂಚನೆ

ಹನೂರು:ಮಾ:31: ಕೋವಿಡ್-19 ಹಿನ್ನಲೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮಾರ್ಗ ಸೂಚಿಯಂತೆ ಸರಳ ಹಬ್ಬವನ್ನು ಆಚರಿಸುವ ದಿಸೆಯಲ್ಲಿ ಪಟ್ಟಣದ ಜನತೆ ಸಹಕರಿಸಬೇಕೆಂದು ತಹಶೀಲ್ದಾರ್ ಜಿ.ಹೆಚ್. ನಾಗರಾಜು ತಿಳಿಸಿದರು.
ಹನೂರು ಪೊಲೀಸ್ ಠಾಣೆಯಲ್ಲಿ ಬೆಟ್ಟಳ್ಳಿ ಮಾರಮ್ಮ ಜಾತ್ರೆ ಅಂಗವಾಗಿ ಕರೆಯಲಾಗಿದ್ದ ಪಟ್ಟಣದ ಯಜಮಾನರು ಮತ್ತು ಮುಖಂಡರುಗಳ ಸಭೆಯಲ್ಲಿ ಮಾತನಾಡಿ, ಹಿಂದಿನಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯದಂತೆ ಹಬ್ಬಆಚರಣೆ ಮಾಡಿಕೊಡಲು ನಮ್ಮ ಸಹಮತವಿದೆ. ಆದರೆ ಹೆಚ್ಚು ಜನ ಸೇರದಂತೆ ನೆರೆ ಹೊರೆಯ ಗ್ರಾಮಸ್ಥರನ್ನು ಹಬ್ಬಕ್ಕೆ ಕರೆಯದೇ ಸ್ಥಳಿಯರೇ ಆಚರಣೆ ಮಾಡಬೇಕು ಎಂದು ತಿಳಿಸಿದರು.
ಸಬ್‍ಇನ್ಸ್‍ಪೆಕ್ಟರ್ ನಾಗೇಶ್ ಮಾತನಾಡಿ, ಕೊರೊನಾ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರು ಹಬ್ಬದ ವೇಳೆ ಶಾಂತಿ ಸೌಹರ್ದತೆಯಿಂದ ಆಚರಣೆ ಮಾಡುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ ಎಂದು ತಿಳಿಸಿದರು.