ಸರ್ಕಾರದಿಂದ 5 ಕೋಟಿ ಸಸಿ ನೆಡಲು ಕ್ರಮ

ದಾವಣಗೆರೆ; ಜೂನ್.17; : ರಾಜ್ಯದಲ್ಲಿ ಶೇ 21 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು ಮಾನದಂಡದಂತೆ ಶೇ 33 ರಷ್ಟು ಅರಣ್ಯ ಪ್ರದೇಶ ಇರಬೇಕಾಗಿದೆ. ಈ ಗುರಿಯನ್ನು ಹಂತ ಹಂತವಾಗಿ ಮುಟ್ಟಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಬಿ.ಖಂಡ್ರೆಯವರು ತಿಳಿಸಿದರು.ಅವರು  ದಾವಣಗೆರೆಯ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ಬಳ್ಳಾರಿ ವೃತ್ತ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ, ವಿಜಯನಗರ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಪರಿಸರ ಅಧಿಕಾರಿಗಳ ಸಭೆಯಲ್ಲಿ ಪರಿಶೀಲನೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಮಾನದಂಡದನ್ವಯ ಶೇ 33 ರಷ್ಟು ಅರಣ್ಯ ಪ್ರದೇಶ ಇರಬೇಕಾಗಿದ್ದು ರಾಜ್ಯದಲ್ಲಿ ಶೇ 12 ರಷ್ಟು ಅರಣ್ಯ ಪ್ರದೇಶದ ಕೊರತೆ ಇದೆ. ಇದನ್ನು ಪ್ರತಿ ವರ್ಷ ಅರಣ್ಯವನ್ನು ಬೆಳೆಸುವುದರ ಮೂಲಕ ಗುರಿ ತಲುಪಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷದಲ್ಲಿ 5 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಿ ಮಳೆಗಾಲ ಆರಂಭವಾದ ತಕ್ಷಣ ಸಸಿಗಳನ್ನು ನೆಡೆಸಲು ಮತ್ತು ರೈತರಿಗೂ ಸಸಿಗಳನ್ನು ವಿತರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.ನಿಯಮಬದ್ದ ಗಣಿಗಾರಿಕೆ; ಯಾವುದೇ ಗಣಿಗಾರಿಕೆಯನ್ನು ಕಾನೂನುಬಾಹಿರವಾಗಿ ಮಾಡಲು ಅವಕಾಶ ಇಲ್ಲ, ಆದರೆ ನಿಯಮಬದ್ದವಾದ ಗಣಿಗಾರಿಕೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ನಿಯಮಬಾಹಿರವಾಗಿ ಗಣಿಗಾರಿಕೆ ಮಾಡಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಲ್ಲಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದರು.
ಅರಣ್ಯ ಅಂಚಿನಲ್ಲಿರುವ ಜನವಸತಿ ತೆರವಿಲ್ಲ; ಕಳೆದ ನಲವತ್ತು, ಐವತ್ತು ವರ್ಷಗಳಿಂದ ಅರಣ್ಯ ಅಂಚಿನಲ್ಲಿ ವಾಸಿಸುತ್ತಿರುವ ಜನವಸತಿ ಪ್ರದೇಶವನ್ನು ಒಕ್ಕಲೆಬ್ಬಿಸುವುದಿಲ್ಲ. ಮತ್ತು ಪಾರಂಪಾರಿಕವಾಗಿ ಉಳುಮೆ ಮಾಡುವವರನ್ನು ಒಕ್ಕಲೆಬ್ಬಿಸುವುದಿಲ್ಲ. ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ಕಳುಹಿಸಲಾಗುತ್ತದೆ ಎಂದ ಅವರು ಗಣಿಗಾರಿಕೆ ಮತ್ತು ವಿಂಡ್ ಮಿಲ್‍ಗೆ ಅನುಮತಿ ಪಡೆದು ಒತ್ತುವರಿ ಮಾಡಿದಲ್ಲಿ ಅಂತಹ ಪ್ರದೇಶದ ತೆರವಿಗೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಯಾವುದೇ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದಲ್ಲಿ ಅದನ್ನು ಜಿ.ಪಿ.ಎಸ್ ಮತ್ತು ಸ್ಯಾಟಲೈಟ್ ಮೂಲಕ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.ಕಾಡು ಪ್ರಾಣಿಗಳಿಂದ ರಕ್ಷಣೆಗೆ ಕ್ರಮ; ವನ್ಯಜೀವಿ ಸಂರಕ್ಷಣೆ ಮಾಡುವುದು ಇಲಾಖೆಯ ಒಣೆಗಾರಿಕೆಯಾಗಿದ್ದು ಇದೇ ವೇಳೆ ಕಾಡುಪ್ರಾಣಿಗಳಿಂದ ಜನರಿಗಾಗುವ ತೊಂದರೆಗಳನ್ನು ತಪ್ಪಿಸಲು ಅಗತ್ಯವಿರುವ ಕಡೆ ರೇಲ್ ಬ್ಯಾರಿಕೇಡ್ ಅಥವಾ ಸೋಲಾರ್ ತಂತಿಬೇಲಿಯ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಕಳೆದ ವರ್ಷ 52 ಜನರು ಆನೆ ತುಳಿತದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದು ಇತ್ತಿಚೇಗೆ ಚಾಮರಾಜನಗರದಲ್ಲಿ ಆನೆ ತುಳಿತದಿಂದ ಪ್ರಾಣ ಕಳೆದುಕೊಂಡ ಮೃತರ ಕುಟುಂಬಕ್ಕೆ ರೂ.15 ಲಕ್ಷ ಪರಿಹಾರದ ಚೆಕ್ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಆನೆಗಳಿಂದಾಗುವ ಸಮಸ್ಯೆಗಳ ಬಗ್ಗೆಯೂ ಗಮನಿಸಲಾಗಿದೆ ಎಂದರು.ಮಾಲಿನ್ಯ ತಡೆಗೆ ಕ್ರಮ; ಕಾರ್ಖಾನೆಗಳು ಬಿಡುವ ಹೊಗೆ, ಧೂಳು, ಕೆರೆಗಳಿಗೆ ಬಿಡುವ ನೀರಿನಿಂದ ನೀರು ಮಾಲಿನ್ಯ, ವಾಯು ಮಾಲಿನ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಅಧಿಕಾರಿಗಳು ಅಂತಹ ಕಾರ್ಖಾನೆಗಳಿಗೆ ಭೇಟಿ ನೀಡಿ ಮಾಲಿನ್ಯ ತಡೆಗೆ ಕೈಗೊಂಡ ಕ್ರಮಗಳ ಪರಿಶೀಲನೆ ನಡೆಸುವರು. ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಬೇಕಾದ ಕಟ್ಟುನಿಟ್ಟಿನ ಕ್ರಮವನ್ನು ಇಲಾಖೆ ಮಾಡಲಿದೆ ಎಂದರು.