ಸರ್ಕಾರದಿಂದ ಬಳ್ಳಾರಿಯಲ್ಲಿ ಜ.29ರಂದು ರಾಜ್ಯ ಮಟ್ಟದ ವೇಮನ ಜಯಂತಿ


ಬಳ್ಳಾರಿ,ಜ.10: ರಾಜ್ಯ ಮಟ್ಟದ ವೇಮನ ಜಯಂತಿಯನ್ನು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜನವರಿ 29 ರಂದು ಬಳ್ಳಾರಿಯಲ್ಲಿ ವಿಜೃಂಭಣೆಯಿಂದ ಆಚರಿಸಲು ಕ್ರಮ ವಹಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್ ಮಂಜುನಾಥ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೇಮನ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ವೇಮನ  ಜಯಂತಿ ಆಚರಿಸಲು ಅನುಮತಿ ಲಭಿಸಿದ್ದು, ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಕ್ರಮ ವಹಿಸಬೇಕು ಎಂದು ಸಮಾಜದ ಭಾಂದವರು ಮನವಿ ಮಾಡಿದರು.
ಜಯಂತಿಯ ಮೆರವಣಿಗೆಯು ವಿವಿಧ ಕಲಾತಂಡಗಳೊಂದಿಗೆ ಅನಂತಪುರ ರಸ್ತೆಯ ರೆಡ್ಡಿ ಸಮಾಜದ ಶಾಲೆ ಆವರಣದಿಂದ ಆರಂಭಗೊಂಡು, ರಾಯಲ್ ವೃತ್ತದಿಂದ ದುರ್ಗಮ್ಮ ಗುಡಿ ಮುಖಾಂತರ ಎಸ್‍ಪಿ ಸರ್ಕಲ್ ಹತ್ತಿರದ ಬಸವ ಭವನದ ವೇದಿಕೆ ಕಾರ್ಯಕ್ರಮಕ್ಕೆ ಸಾಗಲಿದೆ. ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಆಯೋಜಿಸಬೇಕು. ಈ ಸಮುದಾಯದಿಂದ ಶಿಕ್ಷಣ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನಗೈದವರಿಗೆ ಸನ್ಮಾನಿಸಬೇಕು ಎಂದು ತಿಳಿಸಿದರು.
 ಪೊಲೀಸ್ ಇಲಾಖೆಯಿಂದ ಮೆರವಣಿಗೆ ಸಂದರ್ಭದಲ್ಲಿ ಸಂಚಾರಿ ವ್ಯವಸ್ಥೆಗೆ ತೊಂದರೆಯಾಗದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ಧಲಿಂಗೇಶ್ ರಂಗಣ್ಣನವರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಭಾಂದವರು ಇದ್ದರು.