ಸರ್ಕಾರದಿಂದ ತಳವಾರ-ಪರಿವಾರದವರಿಗೆ ಅನ್ಯಾಯ-ಅಪ್ಪುಗೌಡ ಪಾಟೀಲ

ಚಡಚಣ:ನ.21: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದ ಸಿ.ಎಂ.ಯಡಿಯೂರಪ್ಪನವರು ಶೋಷಿತ ಹಿಂದುಳಿದ ತಳವಾರ-ಪರಿವಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ(ಗೊಳಗಿ) ಆರೋಪಿಸಿದ್ದಾರೆ.
ದಶಕಗಳಿಂದ ತಳವಾರ ಮತ್ತು ಪರಿವಾರ ಸಮುದಾಯದವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಲೇ ಇದ್ದಾರೆ. ನಮ್ಮದೇ ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಎಸ್ಟಿ ಮಾನ್ಯತೆ ನೀಡಿ ರಾಜ್ಯ ಪತ್ರ ಹೊರಡಿಸಿದೆ. ಅದಾಗ್ಯೂ ಸ್ಪಷ್ಟೀಕರಣ ಕೇಳುವ ನೆಪದಲ್ಲಿ ರಾಜ್ಯದ 12 ಲಕ್ಷ ಸಮಾಜ ಬಾಂಧವರಿಗೆ ಅನ್ಯಾಯ ಮಾಡಲಾಗುತ್ತಿದೆ.ಇದೀಗ ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಿದರೂ, ಸಮೂದಾಯಕ್ಕೆ ಅನ್ವಯವಾಗುತ್ತಿಲ್ಲವೇಕೆ? ವೀರಶೈವ ಲಿಂಗಾಯತ ಮತ್ತು ಮರಾಠ ಸಮಾಜ ಬಾಂಧವರಿಗೆ ನಿಗಮ ಸ್ಥಾಪಿಸಿದ್ದಕ್ಕೆ ಬಹುಶಃ ನಮಗಿಂತಲೂ ಸಂತೋಷ ಪಡುವ ಸಮುದಾಯ ಬೇರೊಂದಿಲ್ಲ. ಬಸವಕಲ್ಯಾಣದ ಲ್ಲಿ ತಾವು ನಮ್ಮ ಸಮುದಾಯಕ್ಕೆ ಕೊಟ್ಟ ಆಶ್ವಾಸನೆ ಮರೆತು ಹೋಗಿದ್ದೀರಿ. ಅಧಿಕಾರಕ್ಕೆ ಬಂದರೆ ತಳವಾರ-ಪರಿವಾರ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುತ್ತೇನೆಂಬ ತಮ್ಮ ಆಶ್ವಾಸನೆ ಎಲ್ಲಿ ಹೋಯಿತು? ತಮ್ಮದೇ ಕೇಂದ್ರ ಸರ್ಕಾರ ತಳವಾರ-ಪರಿವಾರ ಸಮುದಾಯಕ್ಕೆ ಎಸ್ಟಿ ಮಾನ್ಯತೆ ನೀಡಿದರೂ ತಾವೇಕೆ ವಿಳಂಬ ನೀತಿ ಅನುಸರಿಸುತ್ತಿದ್ದೀರಿ? ಬಲಾಢ್ಯ ಸಮುದಾಯಗಳ ಪರ ನಿಗಮ ಘೋಷಿಸಿ ಓಲೈಸುವ ನಿಮಗೆ, ನಮ್ಮದೂ ಮತಗಳಿವೆ ಎಂಬುದು ಮರೆತು ಹೋಗಿದೆಯೇ? ಯಾವ ಬಸವಕಲ್ಯಾಣದಲ್ಲಿ ಮರಾಠ ಅಭಿವೃದ್ಧಿ ನಿಗಮ ಘೋಷಿಸಿದ್ದೀರೋ ಅದೇ ನೆಲದಲ್ಲಿ ನಮ್ಮ 46 ಸಾವಿರ ಮತಗಳಿವೆ ಎಂಬುದು ಬಹುಶಃ ತಾವು ಮರೆತಂತಿದೆ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ನಿಮ್ಮ ಮಲತಾಯಿ ಧೋರಣಗೆ ಕೈ ಬಿಟ್ಟು. ತಳವಾರ,ಪರಿವಾರ ಸಮೂದಾಯದವರ ಹೋರಾಟದ ಫಲವಾಗಿ ಸಿಕ್ಕ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳಬೇಡಿ. ಈ ಸಮೂದಾಯದವರೂ ಸದಾ ಬಿಜೆಪಿ ಪಕ್ಷದ ಪರವಾಗಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಈ ಸಮೂದಾಯದವರ ಏಳಿಗೆಗೆ ಕೈ ಜೋಡಿಸಿ,ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಧೋರಣೆ ಶಾಪವಾಗಿ ಪರಿಣಮಿಸಬಹುದುಎಂದು ಎಚ್ಚರಿಕೆ ನೀಡಿದರು.