ಸರ್ಕಾರದಿಂದ ಜನರ ಧ್ವನಿ ಹತ್ತಿಕ್ಕುವ ಯತ್ನ: ಖಂಡ್ರೆ ಆರೋಪ

ಬೀದರ:ಮಾ.24: ಸಿಎಎ, ಎನ್‍ಆರ್‍ಸಿ ಹಾಗೂ ಎನ್‍ಪಿಆರ್‍ಗೆ ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಜನರ ಧ್ವನಿ ಹತ್ತಿಕ್ಕಲು ಯತ್ನಿಸಲಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಕಾರ್ಯಾಧ್ಯಕ್ಷರೂ ಹಾಗೂ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‍ಆರ್‍ಸಿ ಹಾಗೂ ಎನ್‍ಪಿಆರ್‍ಗೆ ಇಡೀ ದೇಶದಲ್ಲಿ ದೊಡ್ಡ ಪ್ರಮಾಣದ ವಿರೋಧ ವ್ಯಕ್ತವಾಗುತ್ತಿದೆ. ಶೇ 70 ಕ್ಕೂ ಹೆಚ್ಚು ಜನ ಈ ಮೂರೂ ಕಾಯ್ದೆಗಳನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಈ ಕಾಯ್ದೆಗಳು ಪ್ರಜಾಪ್ರಭುತ್ವ ಹಾಗೂ ಜನಹಿತಕ್ಕೆ ವಿರುದ್ಧವಾಗಿರುವುದೇ ಜನರ ತೀವ್ರ ವಿರೋಧಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗೆ ಇಷ್ಟವಾಗದ ಹಾಗೂ ಜನಹಿತಕ್ಕೆ ಮಾರಕವಾದ ಕಾಯ್ದೆಗಳನ್ನು ವಿರೋಧಿಸುವ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನಿಗೂ ಇದೆ. ಅದರಂತೆಯೇ ಈಗ ಜನ ಸಿಎಎ, ಎನ್‍ಆರ್‍ಸಿ ಹಾಗೂ ಎನ್‍ಪಿಆರ್ ವಿರೋಧಿಸಿ ಹೇಳಿಕೆ, ಧರಣಿ, ರ್ಯಾಲಿ ಹಾಗೂ ಸಮಾವೇಶಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಅದರ ಬೆಂಬಲಿತ ಸಂಘಟನೆಗಳ ಒತ್ತಡಕ್ಕೆ ಮಣಿದು ಈ ಕಾಯ್ದೆಗಳನ್ನು ವಿರೋಧಿಸುವವರ ವಿರುದ್ಧ ದೇಶದ್ರೋಹ ಸೇರಿ ವಿವಿಧ ಪ್ರಕರಣಗಳನ್ನು ದಾಖಲಿಸಿ ಜನರ ಧ್ವನಿ ಅಡಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ದೂರಿದ್ದಾರೆ.

ಶಾಲಾ ವಾರ್ಷಿಕೋತ್ಸವದಲ್ಲಿ ಸಿಎಎ ವಿರುದ್ಧ ಮಕ್ಕಳು ನಾಟಕ ಪ್ರದರ್ಶನ ಮಾಡಿದ್ದಕ್ಕೆ ಜಿಲ್ಲೆಯ ಶಾಹೀನ್ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಿರುವುದು ಇದಕ್ಕೆ ತಾಜಾ ನಿದರ್ಶನವಾಗಿದೆ ಎಂದು ಹೇಳಿದ್ದಾರೆ.

ಶಾಹೀನ್ ಶಿಕ್ಷಣ ಸಂಸ್ಥೆ ಜಾತ್ಯತೀತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಹಿಂದೂ, ಮುಸ್ಲಿಂ, ಸಿಖ್ಖ, ಜೈನ, ಪಾರ್ಸಿ ಸೇರಿದಂತೆ ಸರ್ವ ಸಮುದಾಯಗಳ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೂರು ದಶಕಗಳ ಅವಧಿಯಲ್ಲಿ ಸಂಸ್ಥೆಯಲ್ಲಿ ಯಾರದ್ದೇ ಧಾರ್ಮಿಕ ಭಾವನೆಗಳಿಗೆ ಅಥವಾ ದೇಶದ ಗೌರವಕ್ಕೆ ಧಕ್ಕೆ ಉಂಟು ಮಾಡುವ ಒಂದೇ ಒಂದು ಘಟನೆ ನಡೆದ ಉದಾಹರಣೆಗಳಿಲ್ಲ ಎಂದು ತಿಳಿಸಿದ್ದಾರೆ.

ಇದೀಗ, ಸಿಎಎಗೆ ವಿರೋಧಿಸಿ ಮಕ್ಕಳು ನಾಟಕ ಪ್ರದರ್ಶಿಸಿದ್ದನ್ನು ಮುಂದೆ ಮಾಡಿಕೊಂಡು ಅಲ್ಪಸಂಖ್ಯಾತ ಸಂಸ್ಥೆಯೊಂದರ ಪದಾಧಿಕಾರಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.

ಕೂಡಲೇ ಶಾಹೀನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಹೂಡಿರುವ ದೇಶದ್ರೋಹ ಸೇರಿದಂತೆ ಎಲ್ಲ ಪ್ರಕರಣವನ್ನು ಕೈಬಿಡಬೇಕು. ಸರ್ಕಾರ, ಜನರ ಸ್ವಾತಂತ್ರ್ಯಗಳ ಮೇಲೆ ಸವಾರಿ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.