ಸರ್ಕಾರದಿಂದ ಕುವೆಂಪು ಜನ್ಮ ದಿನೋತ್ಸವ ಘೋಷಿಸಿ

ಬಾಗಲಕೋಟೆ, ಡಿ. 30 : ಭಾಷೆಯ ಮೂಲಕ ಬಾಂಧವ್ಯ ಬೆಸೆಯಬೇಕು. ಇದನ್ನು ಕನ್ನಡದ ಮೊಟ್ಟ ಮೊದಲ ರಾಷ್ಟ್ರಕವಿ ಬಿರುದು ಪಡೆದ ಕುವೆಂಪು ಅವರು ಕವನ-ಮಹಾಗ್ರಂಥಗಳ ಮೂಲಕ ಪ್ರತಿಪಾದಿಸಿದ್ದರು. ಅವರ ಜನ್ಮದಿನವನ್ನು ಭಾರತ ಸರ್ಕಾರದಿಂದ ಅಧಿಕೃತವಾಗಿ ದೇಶಾದ್ಯಂತ ಆಚರಣೆ ಮಾಡಬೇಕು ಎಂದು ಹಿರಿಯ ಸಾಹಿತಿ ಡಾ|ಪ್ರಕಾಶ ಖಾಡೆ ಒತ್ತಾಯಿಸಿದರು.
ನವನಗರದ ಅಕ್ಷಯ ಹೊಟೇಲ್‍ನ ಸಭಾ ಭವನದಲ್ಲಿ ಎಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಕುವೆಂಪು ಜನ್ಮ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ, ಮಾನವ ಬಂಧುತ್ವ ಕಟ್ಟುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು. ಕನ್ನಡ ಅನ್ನದ ಭಾಷೆ ಆಗಬೇಕು. ಇಂಗ್ಲೀಷ ಕಲಿತರೆ ನೌಕರಿ ಸಿಗುತ್ತದೆ ಎಂಬ ಭ್ರಮೆಯಿಂದ ಪಾಲಕರು ಹೊರಬರಬೇಕು. ರಾಜ್ಯದಲ್ಲಿ 5ನೇ ತರಗತಿ ವರೆಗೆ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಬೇಕು. ಬಳಿಕ ವಿದ್ಯಾರ್ಥಿಗಳು-ಪಾಲಕರ ಆಯ್ಕೆಗೆ ಬಿಡಬೇಕು ಎಂದರು.
ಕನ್ನಡ ಉಳಿಸಿ-ಬೆಳೆಸುವ ಕಾರ್ಯ ಅಡುಗೆ ಮನೆಯಿಂದಲೇ ಆರಂಭಗೊಳ್ಳುತ್ತದೆ. ನಮ್ಮ ತಾಯಂದಿರಿಂದ ಇಂದು ಕನ್ನಡ ಭಾಷೆ ಉಳಿದಿದೆ. ಅವರು ನಿತ್ಯದ ಜೀವನ ಅಡುಗೆ ಮನೆಯಿಂದ ಆರಂಭಿಸುವುದ ಕನ್ನಡ ಶಬ್ದಗಳೊಂದಿಗೆ ಎಂದು ಹೇಳಿದರು.
ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಅರ್ಜುನ ಕೋರಿ ಮಾತನಾಡಿ, ಜಾತಿ-ಧರ್ಮ ಎನ್ನದೇ ಕನ್ನಡ ಒಂದೇ ಜಾತಿ ಎಂಬ ಮನೋಭಾವನೆ ನಮ್ಮಲ್ಲಿ ಬರಬೇಕು. ಕುವೆಂಪು ಅವರ ಜನ್ಮದಿನದಂದು ರೈತರು, ಸೈನಿಕ, ಸಾಹಿತಿ ಹಾಗೂ ಪತ್ರಕರ್ತರನ್ನು ಸನ್ಮಾನಿಸಿ, ವಿಶಿಷ್ಟ ಕಾರ್ಯಕ್ರಮವನ್ನು ರಕ್ಷಣಾ ವೇದಿಕೆ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಿ.ಎಂ. ಪಾಟೀಲ ಮಾತನಾಡಿ, ಕುವೆಂಪು ಜನ್ಮದಿನವನ್ನು ಸರ್ಕಾರದಿಂದ ಆಚರಿಸುವಂತೆ ಒತ್ತಾಯಿಸಿ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಕೊಡಲಿದ್ದೇವೆ. ಕನ್ನಡ ನಾಡಿಗೆ ಕುವೆಂಪು ಅವರು ನೀಡಿದ ಕೊಡುಗೆ, ಇಡೀ ದೇಶಕ್ಕೆ ಪರಿಚಯವಾಗಬೇಕು. ಅವರ ಜನ್ಮದಿನ ಆಚರಿಸಿ, ಸ್ಮರಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಡಾ|ಪ್ರಕಾಶ ಖಾಡೆ, ಮುರನಾಳದ ಪ್ರಗತಿಪರ ರೈತ ಸಂಗನಗೌಡ ಪಾಟೀಲ, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಅರ್ಜುನ ಕೋರಿ, ಪತ್ರಕರ್ತ ಶ್ರೀಶೈಲ ಬಿರಾದಾರ ಅವರನ್ನು ಕರವೇಯಿಂದ ಸನ್ಮಾನಿಸಲಾಯಿತು.
ನಿಡಗುಂದಿಯ ಸಮುದಾಯ ಆರೋಗ್ಯ ಕೇಂದ್ರದ ನೌಕರರೂ ಆಗಿರುವ ಕವಿ ಪ್ರಕಾಶ ಜಹಾಗೀರದಾರ ಅವರ ಹೇಳು ಹೋಗು ಕಾರಣ ಎಂಬ ಕವನ ಸಂಕಲನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ನಿಂಗರಾಜ ಮಬ್ರುಮಕರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನ ದೊಡಮನಿ, ಉಪಾಧ್ಯಕ್ಷ ಪವನ ಕಾಂಬಳೆ, ಶಂಕರ ಮುತ್ತಲಗೇರಿ, ಸಿದ್ರಾಮೇಶ್ವರ ಹಾಸನ, ಅಪ್ಪು ಕಟ್ಟಿಮನಿ, ಮಂಜುನಾಥ ಮಾದರ, ಶಿವು ಪಾದಗಟ್ಟಿ, ಬಾಬು ಮಾದರ, ಮಲ್ಲು ಮುತ್ತಲಗೇರಿಮಠ, ನಾಗರಾಜ ಶಿರಗುಪ್ಪ, ಮಲ್ಲಿಕಾರ್ಜುನ ಮುರಾಣಿಕಮಠ, ಮಂಜುನಾಥ ಬೇವಿನಮಟ್ಟಿ, ವಿಷ್ಣು ಪೂಜಾರ, ಹುಚ್ಚೇಶ, ಮಲ್ಲು ಮಡಿವಾಳರ, ನವೀನ ಕಪಾಲಿ, ಬಾಬು ನದಾಫ, ಸಂತೋಷ ಚಿನಿವಾಲ, ವಿಷ್ಣು ಬಾರಕೇರ ಮುಂತಾದವರು ಉಪಸ್ಥಿತರಿದ್ದರು.