ಸರ್ಕಾರಗಳ ಜನ ವಿರೋಧಿ ನೀತಿಗೆ ಆಕ್ರೋಶ

ಹುಳಿಯಾರು,ನ. ೭- ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಜನ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದ್ದರೂ ಜನರು ಪ್ರಶ್ನಿಸುವ, ಖಂಡಿಸುವ ಎದೆಗಾರಿಗೆ ತೋರಿಸದೆ ಮೌನ ವಹಿಸಿದರೆ ಹೇಗೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಪ್ರಶ್ನಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಲು ಹೊರಟಿರುವ ಎಪಿಎಂಸಿ, ಕೃಷಿ, ವಿದ್ಯುತ್ ಹಾಗೂ ಭೂ ಮಸೂದೆ ಹಾಗೂ ಅಗತ್ಯ ವಸ್ತುಗಳ ಮಸೂದೆ ತಿದ್ದುಪಡಿ ವಿರೋಧಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಕರೆ ನೀಡಿದ್ದ ಪ್ರತಿಭಟನೆ ಬೆಂಬಲಿಸಿ ಉಪತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಇಡೀ ಜನಜೀವನದ ಮೇಲೆ ಪರಿಣಾಮ ಬೀರುವಂತಹ ತಿದ್ದುಪಡಿಗಳನ್ನು ಶಾಸನ ಸಭೆ, ಸಂಸತ್ತಿನಲ್ಲಿ ಚರ್ಚಿಸದೆ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ಮುಂದಾಗುತ್ತಿರುವುದು ಜನರನ್ನು ವಂಚಿಸುವ ಕೆಲಸವಾಗಿದೆ. ಬಡ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಿ ದಿವಾಳಿ ಮಾಡುವುದು ಇದರ ಹಿಂದಿನ ಸಂಚಾಗಿದ್ದು ರೈತರು, ರಾಜಕಾರಣಿಗಳು, ಜನಪ್ರತಿನಿಧಿಗಳು ಪಕ್ಷ, ಜಾತಿ, ಬಣ ಬಿಟ್ಟು ದೇಶದ ಒಳಿತಿಗಾಗಿ ಹೋರಾಟಕ್ಕೆ ಕೈ ಜೋಡಿಸಬೇಕು ಎಂದರು.
ಸರ್ಕಾರಗಳು ಜನಸಾಮಾನ್ಯರ ಹಿತ ಕಡೆಗಣಿಸಿ ರೈತರು, ಕಾರ್ಮಿಕರ ಹಿತ ಗಾಳಿಗೆ ತೂರಿ, ಕಾಯ್ದೆಗಳ ತಿದ್ದುಪಡಿ ಮೂಲಕ ಬಂಡವಾಳ ಶಾಹಿಗಳಿಗೆ ಅನುವು ಮಾಡಿಕೊಡಲು ಹೊರಟಿದೆ. ಇದರಿಂದ ಮಾರುಕಟ್ಟೆ ವ್ಯವಸ್ಥೆ ನಾಶವಾಗಿ ಕಾರ್ಪೋರೆಟ್ ಕಂಪನಿಗಳ ಹಿಡಿತಕ್ಕೆ ರೈತರು ಸಿಗಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಈ ಜನ ವಿರೋಧಿ ಕಾಯ್ದೆಗಳು ಜಾರಿಯಾಗಬಾರದು. ಕೇಂದ್ರ ತಿದ್ದುಪಡಿಗಳನ್ನು ಕೈಬಿಡುವವರೆಗೂ ಈ ಹೋರಾಟ ಮುಂದುವರಿಯಲಿದ್ದು ಜನಸಾಮಾನ್ಯರು ಹೋರಟಕ್ಕೆ ಬೆಂಬಲ ನೀಡಬೇಕಿದೆ ಎಂದರು.
ಹುಳಿಯಾರು ಹೋಬಳಿ ರೈತ ಸಂಘದ ಅಧ್ಯಕ್ಷ ಎಸ್.ಸಿ.ಬೀರಲಿಂಗಯ್ಯ ಮಾತನಾಡಿ, ಭೂ ಮಸೂದೆ ತಿದ್ದುಪಡಿಯಿಂದ ಕೃಷಿ ಭೂಮಿ ಕೂಡ ರೀಯಲ್ ಎಸ್ಟೇಟ್ ಜತೆಗೆ ದೊಡ್ಡ ದೊಡ್ಡ ಕಂಪನಿಗಳ ಖರೀದಿಗೆ ಯಾವುದೇ ರೀತಿ ಅಡ್ಡಿ ಇಲ್ಲದಿರುವುದರಿಂದ ದೇಶದ ಸಣ್ಣ, ಅತಿ ಸಣ್ಣ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ವಿದ್ಯುತ್ ಖಾಸಗೀಕರಣ ನೀತಿಯಿಂದಲೂ ರೈತರಿಗೆ ತೀವ್ರತರವಾದ ಪೆಟ್ಟು ಬೀಳಲಿದೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕರಿಯಪ್ಪ, ಹುಳಿಯಾರು ಹೋಬಳಿ ಕಾರ್ಯಾಧ್ಯಕ್ಷ ತಿಮ್ಮಪ್ಪ, ಪೆದ್ದಾಭೋವಿ, ಡಿಎಸ್‌ಎಸ್ ನಾಗರಾಜು, ರಮೇಶ್, ಹನುಮಂತಯ್ಯ, ನೀರಾ ಈರಣ್ಣ ಮತ್ತಿತರರು ಪಾಲ್ಗೊಂಡಿದ್ದರು.