ಸರ್ಕಾರಗಳ ಜನವಿರೋಧಿ ನೀತಿ ವಿರುದ್ಧ ಜನತಾ ಪಕ್ಷ ಆಕ್ರೋಶ

ತುಮಕೂರು, ಏ. ೫- ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ತನ್ನ ಜನ ವಿರೋಧಿ ಕಾನೂನುಗಳ ಮೂಲಕ ಈ ದೇಶದ ಜನರನ್ನು ಕಾಡುತ್ತಿದ್ದು, ಇದರ ವಿರುದ್ದ ದ್ವನಿ ಎತ್ತಬೇಕಾದ ವಿರೋಧ ಪಕ್ಷಗಳು ಸಹ ಮೌನಕ್ಕೆ ಶರಣಾಗಿ, ಜನಸಾಮಾನ್ಯರ ಸಂಕಷ್ಟಗಳನ್ನು ಕೇಳುವವರೇ ಇಲ್ಲದಂತಾಗಿದ್ದಾರೆ ಎಂದು ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಚಂದ್ರಶೇಖರ್ ವಿ.ಸ್ಥಾವರ ಮಠ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೧೪ ಮತ್ತು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಹಲವಾರು ಆಶ್ವಾಸನೆಗಳನ್ನು ಯುವಜನರ ಮುಂದಿಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ, ವಿದೇಶದಿಂದ ಕಪ್ಪು ಹಣ ತರುವುದಾಗಲಿ, ವಾರ್ಷಿಕ ಎರಡು ಕೋಟಿ ಉದ್ಯೋಗವಾಗಲಿ ನೀಡಲಿಲ್ಲ. ಬದಲಾಗಿ ನಿರುದ್ಯೋಗ ಸಮಸ್ಯೆ ತಾಂಡವವಾಡುವಂತೆ ಮಾಡಿದೆ. ಇದರ ಜತೆಗೆ ಸರ್ಕಾರಿ ಕಂಪೆನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಯುವಜನರು ತತ್ತರಿಸುವಂತೆ ಮಾಡಿದೆ. ಈ ಎಲ್ಲಾ ಲೋಪ ದೋಷಗಳ ವಿರುದ್ದ ಧ್ವನಿ ಎತ್ತಬೇಕಾದ ವಿರೋಧ ಪಕ್ಷಗಳು ಐಟಿ, ಇಡಿ ದಾಳಿಗೆ ಹೆದರಿ ಮೌನಕ್ಕೆ ಶರಣಾಗಿವೆ. ಆದರೆ ದೇಶಕ್ಕೆ ಎರಡನೇ ಸ್ವಾತಂತ್ರ್ಯ ತಂದುಕೊಟ್ಟ ಜಯಪ್ರಕಾಶ್ ನಾರಾಯಣ್ ನೇತೃತ್ವದ ಜನತಾ ಪಕ್ಷ ಮತ್ತೊಮ್ಮೆ ಸಕ್ರಿಯ ರಾಜಕಾರಣಕ್ಕೆ ಮರಳುವ ಮೂಲಕ ಜನರ ಪರವಾಗಿ ಕೆಲಸ ಮಾಡಲಿದೆ ಎಂದರು.
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಜಾರಿಗೆ ತಂದಿದ್ದ ತುರ್ತು ಪರಿಸ್ಥಿತಿಯ ವಿರುದ್ದ ಹೋರಾಟಕ್ಕೆ ಇಳಿದು ಜೈಲು ಸೇರಿದ ಅನೇಕ ನಾಯಕರು ಒಗ್ಗೂಡಿ ರಚಿಸಿದ ಜನತಾ ಪಕ್ಷ ದೇಶದಲ್ಲಿಯೇ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಯಿತು. ಕರ್ನಾಟಕದಲ್ಲಿಯೂ ಮೊದಲ ಬಾರಿಗೆ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದು, ಪಂಚಾಯತ್ ರಾಜ್‌ನಂತಹ ಕಾಯ್ದೆಗಳು ಜಾರಿಯಾಗಲು ಕಾರಣವಾಗಿದ್ದು ಜನತಾಪಕ್ಷ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯ್ತಿ ಹಾಗೂ ಇನ್ನಿತರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂದು ಅವರು ಹೇಳಿದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಪರಿಸ್ಥಿತಿ ಹದಗೆಟ್ಟಿದ್ದು, ಖಜಾನೆ ಖಾಲಿಯಾಗಿ, ಎಲ್ಲ ರಂಗದಲ್ಲಿಯೂ ವೈಫಲ್ಯವನ್ನು ಕಂಡಿದೆ. ಬಿಎಸ್‌ವೈಗಿಂತ ಭ್ರಷ್ಟ ಮತ್ತು ದುರ್ಬಲ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ. ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿದು, ಅದನ್ನು ನಿಭಾಯಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಇತ್ತ ಅಧಿಕಾರಿಗಳು, ಮಂತ್ರಿಗಳು ಮಾತು ಕೇಳುತ್ತಿಲ್ಲ. ರಾಜ್ಯದ ಜನತೆಗೆ ಇಂಧನಗಳ ಬೆಲೆ ಹೆಚ್ಚಳ, ಅಗತ್ಯ ವಸ್ತುಗಳು ದರ ಏರಿಕೆಯಿಂದ ತತ್ತರಿಸಿದ್ದರೂ ಉಪಚುನಾವಣೆಯ ಗೆಲುವೊಂದನ್ನೆ ಗುರಿಯಾಗಿಟ್ಟುಕೊಂಡು, ಚುನಾವಣೆ ಇರುವ ಕ್ಷೇತ್ರಗಳಿಗೆ ನೂರಾರು ಕೋಟಿ ರೂ ಅನುದಾನ ನೀಡಿ, ಇತರೆ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ. ಇದರ ವಿರುದ್ದ ಜನತಾಪಕ್ಷ ಸದ್ಯದಲ್ಲಿಯೇ ಹೋರಾಟ ರೂಪಿಸಲಿದೆ. ಅಲ್ಲದೆ ರಾಜ್ಯದ ಜನತೆಯ ಮುಂದೆ ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯಗಳನ್ನು ತಿಳಿಸುವ ಪ್ರಯತ್ನ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಬಶೀರ್, ರಾಜ್ಯ ಪ್ರಧಾನ ಕಾರ್ಯದರ್ಶಿ ವೀರೇಶ್, ಬೆಂಗಳೂರು ನಗರ ಅಧ್ಯಕ್ಷ ಎನ್. ನಾಗೇಶ್, ಉಪಾಧ್ಯಕ್ಷ ಅಭಿಷೇಕ, ತುಮಕೂರು ಜಿಲ್ಲಾಧ್ಯಕ್ಷ ಯತೀಶ್ ಎಂ.ಎನ್. ಮತ್ತಿತರರು ಉಪಸ್ಥಿತರಿದ್ದರು.