
ಶಹಾಬಾದ:ಮಾ.17:ನಗರವನ್ನು ತಾಲೂಕ ಕೇಂದ್ರವೆಂದು ಘೋಷಿಸಿ ಸುಮಾರ ಒಂಬತ್ತು ವರ್ಷವಾದರು ಇಲ್ಲಿಯರವರೆಗೆ ರಾಜ್ಯದಲ್ಲಿ ಅಧಿಕಾರ ನಡೆಸಿರುವ ಎಲ್ಲಾ ಸರ್ಕಾರಗಳು ತಾಲೂಕ ಕಚೇರಿ ಪ್ರಾರಂಭಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎಂ.ಎ.ಜಲೀಲ್ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಅವರು ಹಿಂದೆ ಬಿಜೆಪಿ ಪಕ್ಷದ ಅಧಿಕಾರದಲ್ಲಿ ಜಗದೀಶ ಶೆಟ್ಟರ ಅವರು ಶಹಾಬಾದ ನಗರವನ್ನು ತಾಲೂಕ ಕೇಂದ್ರವೆಂದು ಘೋಷಿಸಿದ್ದರು. ಅವರ ನಂತರ ರಾಜ್ಯದಲ್ಲಿ ಆಡಳಿತ ನಡೆಸಿದ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ತಾಲೂಕ ಕೇಂದ್ರಕ್ಕೆ ಅತ್ಯವಶ್ಯಕವಾದ ಪರಿಪೂರ್ಣ ತಹಶೀಲ್ದಾರ ಕಚೇರಿ, ಉಪ ನೊಂದಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸೇರಿದಂತೆ ಸುಮಾರು 45 ಕ್ಕೂ ಹೆಚ್ಚು ಕಚೇರಿಗಳು ಶಹಾಬಾದ ನಗರಕ್ಕೆ ಬರಬೇಕಾಗಿತ್ತು. ಆದರೆ, ಈ ಕುರಿತು ಎಲ್ಲಾ ಪಕ್ಷಗಳು, ಶಾಸಕರು ಸಂಪೂರ್ಣ ನಿರ್ಲಕ್ಷಿಸಿದ್ದು, ಎಲ್ಲಾ ಸರ್ಕಾರಗಳು ಶಹಾಬಾದ ನಗರದ ಅಭಿವೃದ್ದಿ, ತಾಲೂಕ ಅಭಿವೃದ್ದಿ ಕುರಿತು ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ದೂರಿದರು. ಈ ಕುರಿತು ಸಂಬಂಧಿಸಿದ ರಾಜಕೀಯ ಪಕ್ಷಗಳು ಜನರ ಮುಂದೆ ಸ್ಪಷ್ಟಿಕರಣ ನೀಡಬೇಕೆಂದು ಆಗ್ರಹಿಸಿದರು.