
ದೇವದುರ್ಗ,ಮೇ.೦೧- ಬಹುತೇಕ ಸರ್ಕಾರಗಳು ಬಂಡವಾಳ ಹೂಡಿಕೆದಾರರು ಹಾಗೂ ಕಾರ್ಪೋರೇಟರ್‌ಗಳ ಗುಲಾಮರಾಗಿ ದುಡಿಯವ ವರ್ಗ ಹಾಗೂ ಕಾರ್ಮಿಕರನ್ನು ನಿರಂತರ ಶೋಷಣೆ ಮಾಡುತ್ತಾ ಬರುತ್ತಿವೆ. ಇದರಿಂದ ಆಧುನೀಕ ಯುಗದಲ್ಲೂ ಕಾರ್ಮಿಕರು ತೀವ್ರ ಶೋಷಣೆಗೆ ಒಳಗಾಗುತ್ತಿದೆ ಎಂದು ಸಿಐಟಿಯು ತಾಲೂಕು ಸಂಚಾಲಕ ಗಿರಿಯಪ್ಪ ಪೂಜಾರಿ ಆರೋಪಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಹಮಾಲಿ ಕಾರ್ಮಿಕರ ಸಂಘದ ಕಚೇರಿಯಲ್ಲಿ ಸಿಐಟಿಯು ಧ್ವಜಾರೋಹಣ ಮಾಡಿ ಸೋಮವಾರ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಕಾರ್ಮಿಕರ ಶೋಷಣೆ ಮತ್ತಷ್ಟು ಹೆಚ್ಚಾಗಿದೆ. ಕಾರ್ಮಿಕರ ಪರವಾಗಿದ್ದ ಕಾಯ್ದೆ, ಕಾನೂನುಗಳನ್ನು ಮೊಟಕುಗೊಳಿಸಿ, ಬಂಡವಾಳಗಾರರ ಪರವಾಗಿ ಕಾನೂನು ರೂಪಿಸುತ್ತಿದ್ದಾರೆ.
೧೯೪೮ರ ಕನಿಷ್ಠ ವೇತನ ಕಾಯ್ದೆ ತೆಗೆದು, ದಿನಗೂಲಿ, ಹೊರಗುತ್ತಿಗೆ ಪದ್ಧತಿ ಜಾರಿಮಾಡಿದ್ದಾರೆ. ಕಾರ್ಮಿಕರಿಗೆ ತೀವ್ರ ಅನ್ಯಾಯವಾಗುತ್ತಿದೆ. ಕಾರ್ಮಿಕರಿಗೆ ಬೋನಸ್, ಗ್ರಾಚ್ಯೂಟಿ ಕಾಯ್ದೆ, ಭವಿಷ್ಯ ನಿಧಿ ಕಾಯ್ದೆ ತೆಗೆದು, ಹೊಸ ಪಿಂಚಣಿ ಯೋಜನೆ ಜಾರಿಗಳಿಸಿ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಎಪಿಎಂಸಿ, ಕೃಷಿ ವಲಯ ಹಾಗೂ ಸಾರ್ವಜನಿಕರ ವಲಯಗಳನ್ನು ಖಾಸಗೀಕರಣ ಮಾಡಿ, ಆದಾನಿ, ಅಂಬಾನಿ ಗ್ರೂಪ್‌ಗೆ ಒಪ್ಪಿಸಲು ಮೋದಿ ಹುನ್ನಾರ ನಡೆಸಿದ್ದಾರೆ.
ಹೀಗಾಗಿ ಕಾರ್ಮಿಕ ಸಂಘಟನೆಗಳು ಒಗ್ಗೂಡಿ ಬಲಿಷ್ಠ ಹೋರಾಟ ರೂಪಿಸಲು ಮುಂದಾಗಬೇಕು ಎಂದು ಕರೆ ನೀಡಿದರು. ಅಂಗನವಾಡಿ ನೌಕರರ ಸಂಘಟನೆ ಅಧ್ಯಕ್ಷೆ ರಂಗಮ್ಮ ಅನ್ವರ್, ಜನವಾದಿ ಮಹಿಳಾ ಸಂಘಟನೆ ಶೇಖಮ್ಮ ದೇಸಾಯಿ, ಪ್ರಗತಿಪರ ಚಿಂತಕ ಜಿ.ಬಸವರಾಜ, ಶಿವಪ್ಪ ಬಲ್ಲಿದವ್ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಮಿಕರ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡರಾದ ಯೂಸೂಫ್ ಗ್ವಾಡಿಕರ್, ಬಿಸಿಯೂಟ ಸಂಘಟನೆಯ ಶೋಭಾ, ಹಾಸ್ಟೆಲ್ ನೌಕರರ ಸಂಘಟನೆ ರೇಣುಕಾ, ಹಮಾಲಿ ಕಾರ್ಮಿರಕ ಸಂಘಟನೆ ಯೂಸೂಫ್ ನಾಗೂಂಡಿ, ಗ್ರಾಪಂ ನೌಕರರ ಸಂಘಟನೆ ಪಂಚಯ್ಯ, ರಮಾದೇವಿ ಸೇರಿದಂತೆ ಇತರರಿದ್ದರು.