ಸರಿ ಮಾರ್ಗ ತೋರುವವನೇ ನಿಜವಾದ ಗುರು : ಲೀಲಾಜಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.5  ; ಋಣಾತ್ಮಕ ಬಂಧನದಿಂದ ಬಿಡಿಸಿ,ಸರಿಯಾದ ಮಾರ್ಗ ತೋರಿಸುವವನೇ” ಗುರು” ಅಂತಹ ಗುರುವನ್ನು ನಿತ್ಯವೂ ಸ್ಮರಿಸುವುದೇ ನಮ್ಮ ಉಸಿರಾಗಬೇಕೆಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬಿಕೆ ಲೀಲಾಜಿಯವರು  ಕರೆ ನೀಡಿದರು.ಅವರು ದೇವರಾಜ ಅರಸು ಬಡವಣೆಯಲ್ಲಿರುವ ಹಾಲಕೆರೆ ಶ್ರೀ ಅನ್ನದಾನೀಶ್ವರ ಶಾಖಾಮಠದಲ್ಲಿ ಸಂಕಲ್ಪ ಸೇವಾ ಪೌಂಡೇಶನ್ ರವರು ಏರ್ಪಡಿಸಿದ್ದ “ಯೋಗ ಶಿಕ್ಷಕರುಗಳಿಗೆ “ಗುರು ವಂದನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ , 18 ಮಹಾಪುರಾಣ ಗ್ರಂಥಗಳನ್ನು ರಚಿಸಿದ ವ್ಯಾಸ ಮಹರ್ಷಿಗಳ  ಹುಟ್ಟಿದ ದಿನವೇ ‘”ಗುರುಪೂರ್ಣಿಮೆ”ಎನ್ನುತ್ತಾರೆ ಎಂದರು.ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಜನರ ಮಧ್ಯ ಹಾಡುತ್ತ ಕುಣಿದಾಡಿದ ಸಂತ ಶಿಶುನಾಳ ಶರೀಫ್ ರವರು ಹುಟ್ಟಿದ್ದು ಹುಣ್ಣಿಮೆಯಂದು ಎಂದು ನುಡಿದು, ಗುಣವಂತ ವ್ಯಕ್ತಿಗಳಿಂದ ಆದರ್ಶಗಳನ್ನು ಕೇಳುತ್ತಾ , ಅನುಭವಿಸುತ್ತಾ ಸುಂದರ ಜೀವನ ನಡೆಸಬೇಕೆಂದರು ,
 ” ಗುರುಗಳಲ್ಲಿ ” ಅನೇಕ ವಿಧಗಳಿದ್ದು ಒಳ್ಳೆಯದಕ್ಕೂ ಇದ್ದರೆ. ಕೆಟ್ಟ ಕೆಲಸ ಮಾಡಲು ಗುರುಗಳಿದ್ದಾರೆ,ಜೀವನ ಶೈಲಿ ಬದಲಿಸುವ ಗುರುಗಳಿಂದ ಮಾತ್ರ ಸಮಾಜದಲ್ಲಿ ಒಳ್ಳೆ ಕೆಲಸಗಳಾಗಲು ಸಾಧ್ಯ , ಗುರುಗಳ ಗುರು ಮಹಾಗುರು ಅವನೇ ಯೋಗೇಶ್ವರ , ಅವನು ವಿಶ್ವ ವ್ಯಾಪಿಯಾಗಿದ್ದಾನೆಂದು ನುಡಿದು , ಆರೋಗ್ಯ ರಕ್ಷಣೆಗೆ ದಾರಿ ತೋರುವ ಯೋಗ ಗುರುಗಳ ಹಾಗೂ ವಿದ್ಯಾ ಗುರುಗಳ ಸ್ಮರಣೆ ಅಗತ್ಯವೆಂದರು.
 “ಇತ್ತೀಚೆಗೆ ಯುವಕರು ಮತ್ತು ಯುವತಿಯರು ಮೊಬೈಲ್ ದಾಸರಾಗುತ್ತಿದ್ದಾರೆ , ಇದರಿಂದ ಸಂತೃಪ್ತ ಜೀವನಕ್ಕೆ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ , ಅತ್ತೆ  – ಸೊಸೆ ತಾಯಿ  – ಮಗಳಂತೆ ಒಂದಾಗಿ ಜೀವನ ನಡೆಸಬೇಕೆಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂದೀಪ್ ನರ್ಸಿಂಗ್ ಹೋಂನ  ಡಾ. ಎಚ್ ಎನ್ ಮಲ್ಲಿಕಾರ್ಜುನಪ್ಪ ಮಾತನಾಡಿ ಆಸ್ಪತ್ರೆಗಳ ವೈದ್ಯರು  ರೋಗಿಗಳಿಗೆ ತಪ್ಪುಮಾಹಿತಿ ನೀಡುತ್ತಿದ್ದಾರೆ , ಯೋಗಾಸನದಿಂದ ಮಕ್ಕಳ ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತಾ ಅವರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಿಸುತ್ತಿದ್ದಾರೆ, ಆದ್ದರಿಂದ  ಯೋಗ ಶಿಕ್ಷಕರಿಗೆ ಧನ್ಯವಾದ ಹೇಳಬೇಕೆಂದರು .