ಸರಿಯಾದ ಸಮಯಕ್ಕೆ ಖರೀದಿ ಕೇಂದ್ರ ಆರಂಭಿಸುವಲ್ಲಿ ಸರ್ಕಾರ ವಿಫಲ

ಲಕ್ಷ್ಮೇಶ್ವರ, ನ 4- ಕೇಂದ್ರ ಸರ್ಕಾರ ವಿವಿಧ ಬೆಳೆಗಳಿಗೆ ಬೆಂಬಲ ಘೋಷಿಸಿದೆ. ಆದರೆ ಸರಿಯಾದ ಸಮಯಕ್ಕೆ ಖರೀದಿ ಆರಂಭಿಸುವಲ್ಲಿ ಸೋತಿದೆ. ಇದರಿಂದಾಗಿ ಬೆಂಬಲ ಬೆಲೆಯಿಂದ ರೈತರಿಗೆ ಯಾವುದೇ ಉಪಯೋಗ ಇಲ್ಲ’ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಆರೋಪಿಸಿದರು.
ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಈ ಬಾರಿ ಮುಂಗಾರು ಫಸಲು ಸಂಪೂರ್ಣ ಹಾಳಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಅದರಂತೆ ಗೋವಿನಜೋಳವೂ ಅತೀವೃಷ್ಟಿಗೆ ಶೇ.80ರಷ್ಟು ನಾಶವಾಗಿದೆ. ಬಂದಷ್ಟು ಫಸಲು ಮಾರಾಟ ಮಾಡಬೇಕು ಎಂದು ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕೆ ಕುಸಿದಿದೆ. ಕೇಂದ್ರ ಸರ್ಕಾರ 1,800 ರೂಪಾಯಿ ಬೆಂಬಲ ಘೋಷಿಸಿದೆ. ಆದರೆ ಈವರೆಗಾದರೂ ಖರೀದಿ ಕೇಂದ್ರ ಮಾತ್ರ ತೆರೆದಿಲ್ಲ’ ಎಂದು ಆಕ್ರೋಶ ಹೊರ ಹಾಕಿದರು.
‘ಕ್ಷೇತ್ರದಲ್ಲಿ ಎಲ್ಲ ರಸ್ತೆಗಳು ಹಾಳಾಗಿ ಸಂಚಕಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಅದರಲ್ಲೂ ರೈತ ಸಂಪರ್ಕ ರಸ್ತೆಗಳಂತೂ ಕಿತ್ತು ಮೊಣಕಾಲುದ್ದದ ಗುಂಡಿ ಬಿದ್ದಿವೆ. ಆದರೂ ಸಹ ಜನಪ್ರತಿನಿಧಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ’ ಎಂದ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕ್ಷೇತ್ರದಲ್ಲಿ ಯಾವುದೇ ಚೆಕ್ ಡ್ಯಾಂ, ಬಾಂದಾರ, ಸಿಸಿ ರಸ್ತೆ ಆಗಿಲ್ಲ. ಶಾಸಕರು ಒಮ್ಮೆಯೂ ಪ್ರಗತಿಪರಿಶೀಲನಾ ಸಭೆ ನಡೆಸಿಲ್ಲ. ಹೀಗಾಗಿ ಅಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದು ಆಡಳಿತ ಯಂತ್ರ ಕುಸಿದಿದೆ’ ಎಂದರು.
ಮತ್ತೊರ್ವ ಮಾಜಿ ಜಿ.ಎಸ್. ಗಡ್ಡದೇವರಮಠ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಪಿ. ಬಳಿಗಾರ ಮಾತನಾಡಿ ‘ವಿಧಾನಸಭಾ ಕ್ಷೇತ್ರದಲ್ಲಿ ಇಟಗಿ ಸಾಸಲಾವಾಡ ಏತ ನೀರಾವರಿ ಯೋಜನೆ, ಜಾಲವಾಡಗಿ ಏತ ನೀರಾವರಿ ಯೋಜನೆ, ಸಿಂಗಟಾಲೂರು ಏತ ನೀರಾವರಿ ಯೋಜನೆಗಳು ಅನುಷ್ಠಾನಕ್ಕೆ ಬರಬೇಕಾಗಿತ್ತು. ಆದರೆ ಯಾವುದೂ ಈಡೇರಿಲ್ಲ. ಎಲ್ಲ ಏತ ನೀರಾವರಿ ಯೋಜನೆಗಳು ಜಾರಿ ಆದರೆ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ತಾಲ್ಲೂಕುಗಳ ಸಾವಿರಾರು ಹೆಕ್ಟೇರ್ ಪ್ರದೇಶ ನೀರಾವರಿ ಆಗಲಿದೆ’ ಎಂದ ಅವರು ‘ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಯೂ ಸಹ ಆಮೆ ವೇಗದಲ್ಲಿದ್ದು ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಾದ ಅಗತ್ಯ ಇದೆ’ ಎಂದರು.
**