ಸರಿಗನ್ನಡ ಬಳಕೆ ಅಭಿಯಾನ


ಬೆಂಗಳೂರು, ಮಾ. ೩೦- ಬ್ಯಾಂಕ್‌ಗಳಲ್ಲಿ ಕನ್ನಡ ಬಳಸಿ ಅಭಿಯಾನವನ್ನು ಆರಂಭಿಸಲಾಗಿದೆ. ಎಟಿಎಂಗಳಲ್ಲಿ ಕನ್ನಡ ಬಳಸಲಾಗುತ್ತಿದೆ. ಆದರೆ ಕನ್ನಡ ಕಲಿಯದ ಕೆಲ ಸಿಬ್ಬಂದಿಗಳ ವಿವರಗಳನ್ನು ಬ್ಯಾಂಕ್ ಆಡಳಿತಾಧಿಕಾರಿಗಳು ನೀಡುತ್ತಿಲ್ಲ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಭರಣ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಕಾಯಕ ವರ್ಷದ ಸರಿಗನ್ನಡ ಬಳಕೆಯ ಅಭಿಯಾನ ನಡೆಯುತ್ತಿದೆ. ಮೊದಲನೆ ಅಭಿಯಾನದಲ್ಲಿ ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ, ೨ನೇ ಅಭಿಯಾನದಲ್ಲಿ ನಾಮಫಲಕಗಳಲ್ಲಿ ಶುದ್ಧ ಕನ್ನಡ ಬಳಕೆ, ಮೂರನೆ ಅಭಿಯಾನವಾಗಿ ನಾಡಿನ ಆಡಳಿತ ಶಕ್ತಿ ಕೇಂದ್ರಗಳಲ್ಲಿ ಕನ್ನಡ ಬಳಕೆ, ನಾಲ್ಕನೆಯದಾಗಿ ಸರಿಗನ್ನಡ ಬಳಕೆ ಅಭಿಯಾನ ನಡೆಯಲಿದೆ ಎಂದರು.
ಹಿರಿಯ ಪತ್ರಕರ್ತೆ ಆರ್. ಕಲ್ಯಾಣಮ್ಮ ಅವರ ಜನ್ಮದಿನವಾದ ಇಂದು ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಮಾಧ್ಯಮದಲ್ಲಿ ಸರಿಗನ್ನಡ ಬಳಸಿ
ಮಾಧ್ಯಮಗಳಲ್ಲಿ ಸರಿಯಾದ ಕನ್ನಡ ಬಳಕೆ ಹೆಚ್ಚು ಮಾಡುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜು ಹೊರಟ್ಟಿ ಇದೇ ಸಂದರ್ಭದಲ್ಲಿ ಹೇಳಿದರು.
ಮಾಧ್ಯಮದವರು ಸರಿಗನ್ನಡ ಬಳಸುತ್ತಿಲ್ಲ ಎಂಬ ಮಾತುಗಳಿವೆ. ಹಾಗಾಗಿ ಮಾಧ್ಯಮಗಳು ಶಬ್ಧ ಬಳಕೆಯಲ್ಲಿ ಸರಿಗನ್ನಡವನ್ನು ಹೆಚ್ಚಾಗಿ ಬಳಸುವ ಅಗತ್ಯವಿದೆ ಎಂದು ಅವರು ಹೇಳಿದರು.
೧೯೮೦ ರಲ್ಲಿ ನಾನು ಮೊದಲ ಬಾರಿಗೆ ವಿಧಾನ ಪರಿಷತ್ತಿಗೆ ಆಯ್ಕೆಯಾದೆ. ಅಂದಿನ ದಿನಗಳಲ್ಲಿ ಪರಿಷತ್ತಿಗೆ ಸಾಹಿತಿಗಳು, ಕಲಾವಿದರು, ಬುದ್ಧಿ ಜೀವಿಗಳು ಆರಿಸಿ ಬರುತ್ತಿದ್ದರು. ಆದರೆ ಇಂದು ಪರಿಷತ್ ರಾಜಕಾರಣಿಗಳ ಬೆಂಬಲಿಗರು, ಚುನಾವಣೆಯಲ್ಲಿ ಸೋತವರಿಂದ ತುಂಬಿದೆ ಎಂದು ವಿಷಾದಿಸಿದರು.
ಬೇರೆ ಬೇರೆ ರಂಗಗಳಲ್ಲಿನ ಸಾಧಕರಿಗಿಂತ ರಾಜಕೀಯ ಲಾಬಿ ನಡೆಸುವವರೇ ಪರಿಷತ್‌ಗೆ ಇಂದಿನ ದಿನಗಳಲ್ಲಿ ಆಯ್ಕೆಯಾಗುತ್ತಿದ್ದಾರೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಪ್ರಸ್ತುತ ಚರ್ಚೆಗಳೇ ನಡೆಯುತ್ತಿಲ್ಲ. ಚರ್ಚೆಗಳಲ್ಲಿ ಭಾಗವಹಿಸಿ ಗಹನವಾಗಿ ವಿಚಾರ ಮಂಡಿಸುವತ್ತ ಎಲ್ಲರೂ ಚಿತ್ತ ಹರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಬಿ.ಸಿ. ಲೋಕೇಶ್, ನಗರ ಜಿಲ್ಲಾಧ್ಯಕ್ಷ ಸೋಮಶೇಖರ ಗಾಂಧಿ ಸೇರಿದಂತೆ ಪ್ರಾಧಿಕಾರದ ಸದಸ್ಯ ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು.