ಸರಾಯಿ ಕುಡಿತದಿಂದ ವಿಳಾಸಪೂರ ಗ್ರಾಮದಲ್ಲಿ ಕುಟುಂಬಗಳು ಬೀದಿ ಪಾಲು ಪ್ರತಿಭಟನೆ

ಬೀದರ :ಮೇ.28:ತಾಲೂಕಿನ ವಿಳಾಸಪೂರ ಗ್ರಾಮದ ಒಂದು ಚಿಕ್ಕ ಹಳ್ಳಿಯಾಗಿದ್ದು ಈ ಊರಲ್ಲಿ 6-7 ಕಿರಾಣಾ ಅಂಗಡಿಗಳಲ್ಲಿ ಅನಧಿಕೃತವಾಗಿ ಸರಾಯಿಯನ್ನು ನಿರ್ಭಯವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಮದ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೆಲ್ಲರೂ ಸರಾಯಿ ಕುಡಿತದ ಚಟಕ್ಕೆ ಬಿದ್ದು ಹಾಳಾಗುತ್ತಿದ್ದಾರೆ. ಬಹುತೇಕ ಗ್ರಾಮಸ್ಥರು ಕೂಲಿ ಕೆಲಸ ಮಾಡಿ, ತಮ್ಮ ಕುಟುಂಬದ ನಿರ್ವಹಣೆ ಮಾಡುತ್ತಿದ್ದು, ತಾವು ಗಳಿಸುವ ಕೂಲಿ ಹಣವನ್ನು ಕುಡಿತಕ್ಕೆ ಬಳಸುತ್ತಿದ್ದು, ಅಲ್ಲದೇ ಕುಡಿದ ಅಮಲಿನಲ್ಲಿ ಹೆಂಡತಿ ಮಕ್ಕಳೆನ್ನದೇ ಎಲ್ಲರಿಗೂ ಹೊಡೆ ಬಡೆ ಮಾಡುವುದು ಹಾಗೂ ಕುಡಿದ ನಶೆಯಲ್ಲಿ ಚಿರಡುವುದು ಅವಾಚ್ಛ ಶಬ್ದಗಳಿಂದ ಬೈಯುವುದು ಮಾಡುತ್ತಿರುವುದರಿಂದ ಶಾಂತ ರೀತಿಯಲ್ಲಿದ್ದ ಗ್ರಾಮ ಇಂದು ಸರಾಯಿ ಮಾರಾಟದಿಂದ ಶಾಂತಿಯನ್ನು ಕಳೆದುಕೊಳ್ಳುತ್ತಿದೆ. ಸರಾಯಿ ನಶೆಯಲ್ಲಿ ಕೆಲಸಕ್ಕೆ ಹೋಗುವುದನ್ನೇ ಬಿಟ್ಟಿರುತ್ತಾರೆ. ಹೆಂಡಂದಿರು ಅವರಿವರ ಜಮೀನಿನಲ್ಲಿ ಕೆಲಸ ಮಾಡಿದ ಕೂಲಿ ಹಣವು ಸಹ ಇವರಿಂದ ಕಸಿದುಕೊಂಡು ಸರಾಯಿ ಕುಡಿಯುತ್ತಿದ್ದಾರೆ. ಎಳೆ ಮಕ್ಕಳು ಕೂಡು ಸದರಿ ಸರಾಯಿ ಕುಡಿತದ ದಾಸರಾಗುತ್ತಿದ್ದಾರೆ.
ಗ್ರಾಮದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಸರಾಯಿಯಿಂದ ಗ್ರಾಮದ ಸಂಪೂರ್ಣ ನೆಮ್ಮದಿ ಹಾಳಾಗಿದ್ದು, ಬಹುತೇಕ ಕುಡುಕರು ತಮ್ಮ ಜಮೀನುಗಳನ್ನು ಕೂಡ ಸರಾಯಿ ಚಟಕ್ಕೆ ಗುಲಾಮರಾಗಿ ಅಷ್ಟಿಷ್ಟ ಇದ್ದ ಜಮೀನು ಕೂಡ ಮಾರಾಟ ಮಾಡಿಕೊಂಡು ತಮ್ಮ ಕುಟುಂಬವನ್ನು ಬಿದಿಗೆ ತಂದಿರುತ್ತಾರೆ.
ಗ್ರಾಮದ ಅಂಬೇಡ್ಕರ ಭವನ ಎದುರುಗಡೆ ಇವರು 2-ಕಿರಾಣಾ ಅಂಗಡಿಗಳಲ್ಲಿ ಸರಾಯಿ ನಿರ್ಭಯವಾಗಿ ಮಾರಾಟ ಮಾಡುತ್ತಿರುವ ಸದರಿ ಅಂಗಡಿಗಳ ಮಾಲೀಕರನ್ನು ವಿಚಾರಿಸಿದಾಗ ನಾವು ಸುಮಾರು 50 ಸಾವಿರ ಹಣ ಸದರಿ ವ್ಯಾಪಾರದಲ್ಲಿ ಹೂಡಿರುತ್ತೇವೆ ನಾವು ಹೂಡಿರುವ ಹಣ ರು. 50 ಸಾವಿರ ಕೊಟ್ಟರೆ ನಾವು ನಮ್ಮ ಅಂಗಡಿಯಲ್ಲಿ ಸರಾಯಿ ಮಾರಾಟ ವ್ಯಾಪಾರವನ್ನು ಮುಚ್ಚುವುದಾಗಿ ಹೇಳುತ್ತಿದ್ದಾರೆ. ಸದರಿ, ಗ್ರಾಮದ ಈ ಅಂಬೇಡ್ಕರ ಭವನದ ಎದುರುಗಡೆ ಇರುವ ಈ ಅಂಗಡಿಗಳಿಂದ ಸರಾಯಿ ಖರೀದಿ ಮಾಡಿ, ಅಂಬೇಡ್ಕರ ಭವನದಲ್ಲಿ ಸರಾಯಿ ಕುಡಿದಲ್ಲಿ ಗ್ರಾಮದಲ್ಲಿ ಕೋಮು ಗಲಭೆಗಳು ಆಗುವ ಸಂಭವ ಇರುತ್ತದೆ. ಆದಕಾರಣ, ಗ್ರಾಮದಲ್ಲಿ ಕಾನೂನು ಬಾಹೀರವಾಗಿ ನಿರ್ಭಯವಾಗಿ ಸರಾಯಿ ಮಾರಾಟ ಮಾಡುತ್ತಿರುವ ಕಿರಾಣಾ ಅಂಗಡಿಗಳ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಹಾಳಾಗುತ್ತಿರುವ ಗ್ರಾಮದ ನೆಮ್ಮದಿ, ಶಾಂತಿಯನ್ನು ಉಳಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ವಿಳಾಸಪೂರ ಗ್ರಾಮದ ಮಹಿಳೆಯರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.