ಸರಸ ಸಲ್ಲಾಪ ಪತ್ನಿಯ ಪ್ರಿಯಕರನ ಕೊಂದ ಪತಿ

ಬೆಂಗಳೂರು,ಮಾ.೨೫- ಪತ್ನಿಯ ಜತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಯುವಕನನ್ನು ರೊಚ್ಚಿಗೆದ್ದ ಪತಿ ಕತ್ತು ಹಿಸುಕಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಬ್ಯಾಡರಹಳ್ಳಿಯ ಅಂದ್ರಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲ್ಲೂಕಿನ ಹೊಸಳ್ಳಿ ತಾಂಡದ ಶಿವಕುಮಾರ್ (೨೭) ಕೊಲೆಯಾದವರು. ಕೃತ್ಯವೆಸಗಿದ ಭರತ್‌ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಹೊಸಳ್ಳಿ ತಾಂಡದ ವಿನುತಾ (೩೦) ೮ ವರ್ಷಗಳ ಹಿಂದೆ ಮರಗೆಲಸ ಮಾಡುತ್ತಿದ್ದ ಭರತ್‌ಕುಮಾರ್‌ನನ್ನು ವಿವಾಹವಾಗಿದ್ದು, ಅಂದರಹಳ್ಳಿಯಲ್ಲಿ ದಂಪತಿಯು ಬಾಡಿಗೆ ಮನೆಮಾಡಿಕೊಂಡು ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ವಿನುತಾ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದು,ಕೌಟುಂಬಿಕ ಕಲಹದಿಂದ ಪತಿಯನ್ನು ಬಿಟ್ಟು ಮೂರುವರೆ ವರ್ಷಗಳಿಂದ ವಿನುತಾ ಬೇರೆಯಾಗಿ ವಾಸಿಸುತ್ತಿದ್ದರು.
ಈ ಮಧ್ಯೆ ತಮ್ಮದೇ ತಾಂಡದ ಶಿವಕುಮಾರ್ ಕ್ರೋಮಾ ಕಂಪನಿಯಲ್ಲಿ ಸೇಲ್ಸ್ ಮೆನ್ ಆಗಿದ್ದು, ಆತನ ಪರಿಚಯವಾಗಿ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು. ವಿನುತಾ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ಶಿವಕುಮಾರ್‌ನನ್ನು ನೋಡಿದ ಪತಿ ಭರತ್ ಕುಮಾರ್ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ವಿನುತಾ ಹಾಗೂ ಶಿವಕುಮಾರ್ ನಡೆತೆ ಸರಿ ಹೋಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಭರತ್‌ಕುಮಾರ್ ಶಿವಕುಮಾರ್ ಕೊಲೆಗೆ ಸಂಚು ರೂಪಿಸಿದ್ದ.
ಸರಸದಲ್ಲಿ ಸಿಕ್ಕಿ ಬಿದ್ದ
ವಿನುತಾ ಮನೆಗೆ ಶಿವಕುಮಾರ್ ರಾತ್ರಿ ಬರುವುದನ್ನು ಕಾದುಕುಳಿತ್ತಿದ್ದ ಭರತ್‌ಕುಮಾರ್ ಆತ ಬಂದ ಬಳಿಕ ಮನೆಒಳಗೆ ನುಗ್ಗಿ ಮಂಚದ ಅಡಿ ಅವಿತುಕೊಂಡಿದ್ದ. ಇದನ್ನು ಗಮನಿಸದ ಶಿವಕುಮಾರ್ ವಿನುತಾಳ ಜತೆ ಸರಸ ನಡೆಸಿದ್ದು, ಮಧ್ಯರಾತ್ರಿ ವಿನುತಾ ಬಚ್ಚಲು ಮನೆಗೆ ಹೋಗಿದ್ದು,ಕೂಡಲೇ ಚಿಲಕ ಹಾಕಿದ ಭರತ್‌ಕುಮಾರ್, ಮಂಚದ ಮೇಲೆ ಮಲಗಿದ್ದ ಶಿವಕುಮಾರ್‌ನ ಕತ್ತು ಹಿಸುಕಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಸ್ವಲ್ಪ ಹೊತ್ತಿನನಂತರ ವಿನುತಾ ಬಾಗಿಲು ಬಡಿದು ಹೊರ ಬಂದು ನೋಡಿದಾಗ ಶಿವಕುಮಾರ್ ಕೊಲೆಯಾಗಿದ್ದು,ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಬ್ಯಾಡರಹಳ್ಳಿ ಪೊಲೀಸರು ಭರತ್‌ಕುಮಾರ್‌ನನ್ನು ಬಂಧಿಸಿ ಮಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಸಂಜೀವ್ ಪಾಟೀಲ್ ತಿಳಿಸಿದ್ದಾರೆ.