ಸರಸ್ವತಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ

ಶಹಾಬಾದ:ಜು.14:ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ಅತಿ ಅಗತ್ಯವಾಗಿದ್ದು, ಅದಕ್ಕಾಗಿ ನಾವು ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಗೆ ನಮ್ಮ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಉಪನ್ಯಾಸಕಿ ರಾಧಾ ಅವರು ಹೇಳಿದರು. ಅವರು ನಗರದ ಭೀಮಶಪ್ಪ ನಗರದಲ್ಲಿರುವ ಸರಸ್ವತಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ದಿನೇ ದಿನೇ ಹೆಚ್ಚುತ್ತಿರುವ ಭೂಮಿಯ ತಾಪಮಾನವನ್ನು ಕಡಿಮೆ ಮಾಡಲು ಹಾಗೂ ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿಯನ್ನು ಪಡೆಯಲು ಪ್ರತಿಯೊಬ್ಬ ಮಗು, ಪ್ರತಿಯೊಬ್ಬ ನಾಗರಿಕರು ಮರಗಿಡಗಳನ್ನು ನೆಟ್ಟು ಪರಿಸರ ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಶಿಕ್ಷಕಿ ಸುರೇಖಾ ಮಾತನಾಡಿ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಅಗತ್ಯವಿದ ಎಂದು ಸಲಹೆ ನೀಡಿದರು. ವಿಜಯ ಕಂಪ್ಯೂಟರ್ ನಿರ್ದೇಶಕ ವಾಸುದೇವ ಚವ್ಹಾಣ್ ಶಿಕ್ಷಕಿ ರಮಾಬಾಯಿ, ರೇಣುಕಾ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲಕರು ಪಾಲ್ಗೊಂಡಿದರು.