ಸರಸ್ವತಿ ನಗರದ ಉದ್ಯಾನವನದಲ್ಲಿ ಪರಿಸರ ದಿನಾಚರಣೆ‌

ದಾವಣಗೆರೆ. ಜೂ.೧೧: ಕೋರೋನಾ ವೈರಸ್ ಮನುಷ್ಯನಿಗೆ ಪರಿಸರ ಸಂರಕ್ಷಣೆಯ ಅವಶ್ಯಕತೆಯ ಪಾಠ ಕಲಿಸಿದೆ. ಪರಿಸರ ನಾಶವೇ ಮನುಷ್ಯನ ಇಂದಿನ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಸಸ್ಯ ಸಂಕುಲವಿದ್ದರೆ ಮಾತ್ರ ಮನುಕುಲಕ್ಕೆ ಒಳಿತು ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಅಭಿಪ್ರಾಯಪಟ್ಟರು. 33 ನೇ ವಾರ್ಡ್‌ನಲ್ಲಿ ಪಾಲಿಕೆ ಸದಸ್ಯ ಕೆ.ಎಂ.ವೀರೇಶ್ ಅವರು ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಉದ್ಯಾನವನದಲ್ಲಿ ಒಂದು ನೂರು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ನಮಗಿಂದು ಆಮ್ಲಜನಕದ ಮಹತ್ವ ಅರಿವಾಗಿದೆ. ನೈಸರ್ಗಿಕವಾಗಿ ಸಿಗುವ ಆಮ್ಲಜನಕದ ಮೂಲವನ್ನು ನಾಶ ಮಾಡಿ ಕೃತಕ ಆಮ್ಲಜನಕದ ಮೊರೆ ಹೋಗುವ ಪರಿಸ್ಥಿತಿ ಬಂದೊದಗಿದೆ‌. ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ವಾತಾವರಣದ ಸೃಷ್ಟಿಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಶಾಸಕರು ಕರೆ ನೀಡಿದರು.ವಿಶ್ವ ಪರಿಸರ ದಿನಾಚರಣೆಯನ್ನು ಆಯೋಜಿಸಿದ್ದ ಪಾಲಿಕೆ ಸದಸ್ಯ ಕೆ.ಎಮ್.ವೀರೇಶ್ ಅವರು ಮಾತನಾಡಿ ವಿಶ್ವ ಸಂಸ್ಥೆಯು ಈ ವರ್ಷ “ಪರಿಸರ ವ್ಯವಸ್ಥೆಯ ಮರು ಸ್ಥಾಪನೆ” ಎಂಬ ಘೋಷವಾಕ್ಯದ ಮೂಲಕ ಪರಿಸರದ ಮೂಲ ವ್ಯವಸ್ಥೆಗೆ ತಕ್ಕನಾಗಿ ಪರಿಸರವನ್ನು ಮರುಸ್ಥಾಪಿಸಬೇಕೆಂದು ಕರೆ ನೀಡಿದೆ. ಈಗಾಗಲೇ ಪರಿಸರ ನಾಶದಿಂದ ಜಾಗತಿಕ ತಾಪಮಾನವು ಸತತವಾಗಿ ಹೆಚ್ಚಾಗುತ್ತಿದೆ. ಅಂತರ್ಜಲ ಹಂತ ಹಂತವಾಗಿ ಕುಸಿಯುತ್ತಿದೆ. ಜೊತೆಗೆ ಆಮ್ಲಜನಕದ ಕೊರತೆಯಾಗುತ್ತಿರುವುದು ನಮ್ಮ ಅನುಭವಕ್ಕೆ ಬರುತ್ತಿದೆ. ಹಾಗಾಗಿ ನಾವೆಲ್ಲರೂ ಪರಿಸರದ ಸಂರಕ್ಷಣೆಗೆ ಮುಂದಾಗೋಣ. ಗಿಡಗಳನ್ನು ನೆಡುವುದು ಮಾತ್ರವಲ್ಲದೇ ಅವುಗಳನ್ನು ಪೋಷಿಸೋಣ. ಜೊತೆಗೆ ಸ್ವಚ್ಛತೆಯನ್ನು ಕಾಪಾಡಿ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳೋಣ. 33ನೇ ವಾರ್ಡನ್ನು ಹಸಿರು ಮತ್ತು ಸ್ವಚ್ಛಮಯ ಮಾಡೋದು ನನ್ನ ಗುರಿ ಮತ್ತು ಕನಸಾಗಿದೆ. ಹಾಗಾಗಿ ಮಹಾನಗರ ಪಾಲಿಕೆಯ ಜೊತೆಗೆ ಸಾರ್ವಜನಿಕರು ಕೈಜೋಡಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ವಿದಾನಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿ ಸ್ವಾಮಿ, ಶ್ರೀ ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಮ್.ಸುರೇಶ್, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಕೆ.ಜಿ.ಯಲ್ಲಪ್ಪ,  ಲಿಂಗಪ್ಪ, ಎಲ್‌ಐಸಿ ರುದ್ರೇಶ್, ಕೂಲಂಬಿ ಬಸಣ್ಣ, ಹೆಚ್.ಎಮ್‌.ಮಲ್ಲಿಕಾರ್ಜುನಪ್ಪ, ವಿ.ಸಿದ್ದೇಶ್ ಮತ್ತಿತರರು ಹಾಜರಿದ್ದರು.