ಸರಸಂಬಾ: ಬಿಜೆಪಿ ಮುಖಂಡನ ಕೊಲೆ

ಕಲಬುರಗಿ,ಮಾ.1-ಮಾರಕಾಸ್ತ್ರಗಳಿಂದ ಹೊಡೆದು ಬಿಜೆಪಿ ಮುಖಂಡನೊಬ್ಬನನ್ನು ಕೊಲೆ ಮಾಡಿರುವ ಘಟನೆ ಆಳಂದ ತಾಲ್ಲೂಕಿನ ಸರಸಂಬಾ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ಮುಖಂಡ ಮಹಾಂತಪ್ಪ ಸಿದ್ದರಾಮಪ್ಪ ಆಲೂರೆ (45) ಕೊಲೆಯಾದ ವ್ಯಕ್ತಿ.
ಕಾರಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿಯಾಗಿ ಸಿದ್ದರಾಮಪ್ಪ ಆಲೂರೆ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಸಿದ್ದರಾಮಪ್ಪ ಅವರನ್ನು ಮಹಾರಾಷ್ಟ್ರದ ಸೋಲಾಪೂರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸರಸಂಬಾ ಗ್ರಾಮದಲ್ಲಿ ಧನಲಕ್ಷ್ಮೀ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಮಹಾಂತಪ್ಪ ಅವರು ಸತತ ಮೂರು ಬಾರಿ ಗ್ರಾಮ ಪಂಚಾಯತಿ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.