ಸರಳ ಹೋಳಿ ಆಚರಣೆ

ಬಂಕಾಪುರ, ಏ2 : ಗುರುವಾರ ಪಟ್ಟಣದಲ್ಲಿ ರಂಗ ಪಂಚಮಿ ಅಂಗವಾಗಿ ನಡೆದ ಹೋಳಿ ಹಬ್ಬ, ಶಾಂತಿಯತವಾಗಿ ನಡೆಯತು. ಹೋಳಿಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು, ಮಕ್ಕಳು ಪರಸ್ಪರ ಬಣ್ಣ ಎರುಚಿ ಬಣ್ಣದಾಟ ರಂಗೇರಿಸಿದರು.
ಮಹಿಳೆಯರು ಹಾಗೂ ಮಕ್ಕಳು ಅಲ್ಲಲ್ಲಿ ತಮ್ಮ ಮನೆಯಂಗಳದಲ್ಲಿಯೇ ಆಪ್ತರಿಗೆ ಬಣ್ಣ ಹಚ್ಚಿ ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಟಮಟೆ ನಾದದೊಂದಿಗೆ ಯುವಕರ ದಂಡು ಸಾಗುತ್ತಿದ್ದರೇ, ಕೆಲವರು ಹಲಿಗೆ ಶಬ್ದಕ್ಕೆ ಕುಣಿದು ಕುಪ್ಪಳಿಸಿದರು. ಕೊಟ್ಟಿಗೇರಿ, ಅರಳೆಲೆಮಠ, ಸುಂಕದಕೇರಿ, ಸಿಂಪಿಗಲ್ಲಿ ಸೇರಿದಂತೆ ಪಟ್ಟಣದಲ್ಲೆಡೆ ಬಣ್ಣದಾಟ ಗಮನ ಸೆಳೆಯಿತು. ಚಕ್ಕಡಿಯಲ್ಲಿ ಬಣ್ಣದ ಬೃಹತ್ ಆಕಾರದ ಪಾತ್ರಗಳನ್ನು ಇಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರ ಮೇಲೆ ಬಣ್ಣ ಎರುಚಿ ಸಂಭ್ರಮಿಸಿದರು. ನಂತರ ಸಂಪ್ರದಾಯದಂತೆ ವಿಧಿ ವಿಧಾನಗಳಲ್ಲಿ ಕಾಮದಹನ ಮಾಡಿದರು.
ಪಟ್ಟಣದಲ್ಲಿ ನಡೆದ ಹೋಳಿ ಹಬ್ಬದ ನಿಮಿತ್ತ ಡಿವೈಎಸ್ಪಿ ಓ.ಬಿ.ಕಲ್ಲೇಶಪ್ಪ, ಸಿಪಿಐ ಬಸವರಾಜ ಹಳಬಣ್ಣವರ, ಪಿಎಸ್‍ಐ ಸಂತೋಷ ಪಾಟೀಲ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.