ಸರಳ, ಸಹಜ, ಸತ್ಯ, ಅಹಿಂಸೆಯಿಂದ ಬದುಕಿದಾಗ ಮಾತ್ರ ಮನುಷ್ಯ ನೆಮ್ಮದಿಯಾಗಿ ಇರಬಲ್ಲ:ಡಾ. ಬಸವರಾಜ ಡೋಣೂರ

ಕಲಬುರಗಿ:ಜು.03: ಮನುಷ್ಯನ ಮನದ ಮಂದಿರದಲ್ಲಿ ಮಹಾದೇವನಿದ್ದು ಕರುಣೆ, ಪ್ರೀತಿ, ವಾತ್ಸಲ್ಯಗಳ ಮೂಲಕ ನಾವುಗಳು ಅದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ, ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಯಿಂದ ಕಂಡು ಬದುಕು ಸಾಗಿಸಬೇಕಾಗಿದೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ: ಬಸವರಾಜ ಡೋಣೂರ ನುಡಿದರು.
ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಮಠದಲ್ಲಿ ಗುರುಪೂರ್ಣಿಮಾ ಅಂಗವಾಗಿ ಪೂಜ್ಯ ಶ್ರೀಗಳ ಪಾದಪೂಜೆ, ತುಲಾಭಾರ ಮತ್ತು ಆರೋಗ್ಯ ತಪಾಸಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯ ಇಂದು ಆಡಂಬರದ ಬೆನ್ನು ಹತ್ತಿ ಮಾನಸಿಕ ಮತ್ತು ದೈಹಿಕ ಸಂಪತನ್ನು ಕಳೆದುಕೊಳ್ಳುತ್ತಿದ್ದು, ಸರಳ, ಸಹಜ, ಸತ್ಯ, ಅಹಿಂಸೆಯಿಂದ ಬದುಕಿದಾಗ ಮಾತ್ರ ಮನುಷ್ಯ ನೆಮ್ಮದಿಯಾಗಿ ಇರಬಲ್ಲ, ಜೀವನದ ಪರಿಪೂರ್ಣತೆಯನ್ನು ಅರ್ಥೈಸಿಕೊಳ್ಳಬಲ್ಲ ಎಂದು ಪ್ರತಿಪಾದಿಸಿದರು.
ಬದುಕಿಗೆ ಸಿರಿಸಂಪತ್ತಿಗಿಂತ ಸಮಾಧಾನ ಮತ್ತು ಸಂತೃಪ್ತಿ ಬಹುಮುಖ್ಯವಾಗಿದ್ದು ಆಧ್ಯಾತ್ಮ ನಮಗೆ ದೊರಕಿಸಿಕೊಡಬಲ್ಲದು. ಗುರುವಿನ ಸಾಮಿಪ್ಯದಲ್ಲಿ ಮನುಷ್ಯ ಸುಂದರ ಬದುಕನ್ನು ಕಟ್ಟಿಕೊಳ್ಳಬಲ್ಲ ಎಂದು ನುಡಿದರು. ಸೇವೆಯಲ್ಲಿ ಶಿವನನ್ನು ಕಾಣಬಹುದು, ಅಶಕ್ತರ, ಬಳಲಿದವರ, ನೊಂದವರ ಸೇವೆ ನಿಜವಾದ ಪೂಜೆ ಎಂದು ಡೋಣೂರ ನುಡಿದರು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯ ರೇವಣಸಿದ್ದ ಶಿವಾಚಾರ್ಯರು ಮನುಷ್ಯನ ಬದುಕಿಗೆ ಗುರು ಬಹಳ ಮುಖ್ಯವಾಗಿದ್ದು ಗುರು ಉಪದೇಶದಿಂದ ಮನುಷ್ಯ ಸಂತೃಪ್ತಿಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ನುಡಿದ ಅವರು ಭಕ್ತರು ಭಕ್ತಿಯ ಮಾರ್ಗದಲ್ಲಿ ನಡೆದು ಬದುಕು ಹಸನು ಮಾಡಿಕೊಳ್ಳುವಂತೆ ಕರೆ ನೀಡಿದರು. ಮನುಷ್ಯ ಇಲ್ಲಿ ವ್ಯವಹಾರಕ್ಕಾಗಿ ಹಣ ಕೂಡಿಡಲು, ಗಳಿಸಿಡಲು ಬಂದಿಲ್ಲ, ಉತ್ತಮವಾದ ಜೀವನ ಮಾಡಲು ಬಂದಿದ್ದು, ಒಳ್ಳೆಯ ಆರೋಗ್ಯ, ನೆಮ್ಮದಿಯ ಬದುಕಿನಿಂದ ಬಾಳುವಂತೆ ಕರೆ ನೀಡಿದರು.
ವೇದಿಕೆಯ ಮೇಲೆ ಸಾಂಸ್ಕøತಿಕ ಲೋಕದ ಅಧ್ಯಕ್ಷರಾದ ಡಾ: ರಾಜೇಂದ್ರ ಯರನಾಳೆ, ಸಾಹಿತಿ ಬಿ.ಹೆಚ್.ನಿರಗುಡಿ, ಖ್ಯಾತ ವೈದ್ಯರಾದ ಡಾ: ಸಂತೋಷ ಜೆ. ಮಂಗಶೆಟ್ಟಿ, ವಾಣಿವಿಲಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ವಾಣಿ ಪ್ರಸಾದ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಮಠದಿಂದ ಖ್ಯಾತ ಪುರೋಹಿತರಾದ ಧನಂಜಯ ಸ್ವಾಮಿ, ಗಂಗಾಧರ ಅಗ್ಗಿಮಠ, ಮಹೇಶ್ವರ ಶಾಸ್ತ್ರಿಗಳು ಭದ್ರಯ್ಯ ಸ್ವಾಮಿ ಸಾಲಿಮಠ, ಬಸಯ್ಯ ಸ್ವಾಮಿ ಮಠಪತಿ, ರಾಚಯ್ಯ ಸ್ವಾಮಿ ಮಠಪತಿ, ಗೌರಿಶಂಕರ ಸ್ವಾಮಿ ಟೆಂಗಿನಮಠ, ಈರಯ್ಯ ಮಠಪತಿ ನಾಗೂರ, ಶಿವರುದ್ರಯ್ಯ ಸ್ವಾಮಿ, ಚನ್ನಯ್ಯ ಸ್ವಾಮಿ ಮುತ್ಯಾನ ಬಬಲಾದ ಇವರುಗಳಿಗೆ ಪುರೋಹಿತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಶಿವಶಂಕರ ಬಿರಾದಾರ, ಶಿವಶರಣಪ್ಪ, ರಾಜಕುಮಾರ ಉದನೂರ, ಅಣ್ಣಾರಾಯ ಮತ್ತಿಮೂಡ, ಗುಂಡಣ್ಣ ಡಿಗ್ಗಿ, ಶರಣಗೌಡ ಪಾಟೀಲ ಪಾಳಾ, ಮಲ್ಲಿಕಾರ್ಜುನ ವರನಾಳ ಇವರಿಗೆ ಸಮಾಜಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ಸತ್ಕರಿಸಲಾಯಿತು. ಸಮಾರಂಭದಲ್ಲಿ ಶ್ರೀಶೈಲ ಶಾಸ್ತ್ರಿಗಳ ವೈದಿಕ ಬಳಗದಿಂದ ವೇದಘೋಷ ನೆರವೇರಿತು. ಶಿವಶಂಕರ ಬಿರಾದಾರ ಪ್ರಾರ್ಥನಾ ಗೀತೆ ಹಾಡಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.
ಸಮಾರಂಭದಲ್ಲಿ ಶಿವರಾಜ ಪಾಟೀಲ ಅವರಾದ, ಆನಂದ ಲೇಂಗಟಿ, ಶರಣಗೌಡ ಪಾಟೀಲ, ಸಂಗಯ್ಯ ಸ್ವಾಮಿ ಹಿರೇಮಠ, ರವಿ ಶಹಾಪೂರಕರ, ಹಣಮಂತರಾಯ ಅಟ್ಟೂರ, ಚನ್ನವೀರಪ್ಪ ಕುರಿಕೋಟಾ, ಮಾಲಾ ಕಣ್ಣಿ ಸೇರಿದಂತೆ ಶ್ರೀ ಮಠದ ಶಿಷ್ಯರು, ಸದ್ಭಕ್ತರು ಉಪಸ್ಥಿತರಿದ್ದರು.