ಸರಳ, ಸಜ್ಜನಿಕೆ ಅಶ್ವಿನ್ ಕುಮಾರ್ ಗೆಲ್ಲಿಸಿ: ಎಚ್.ಡಿ.ದೇವೇಗೌಡ

ತಿ.ನರಸೀಪುರ: ಮೇ.04:- ಸ್ವಯಂ ಪ್ರೇರಿತರಾಗಿ ಬಂದಿರುವ ಜನಸ್ತೋಮ ಕಂಡರೆ ಅಶ್ವಿನ್ ಕುಮಾರ್ ಜನಪ್ರಿಯತೆ, ಪ್ರಾಮಾಣಿಕತೆಯನ್ನು ಬಿಂಬಿಸುತ್ತದೆ.ಹಾಗಾಗಿ ನಿಷ್ಠಾವಂತ, ಸರಳ, ಸಜ್ಜನಿಕೆಯ ಎಂ.ಅಶ್ವಿನ್ ಕುಮಾರ್ ರನ್ನು ಮತ್ತೆ ಗೆಲ್ಲಿಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.
ತಾಲೂಕಿನ ಬನ್ನೂರು ಪಟ್ಟಣದ ಡೈರಿ ಸರ್ಕಲ್ ಬಳಿ ನಡೆದ ಬೃಹತ್ ಸಭೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು. ಕ್ಷೇತ್ರದ ಜನತೆ ನಡುವೆ ಇದ್ದು, ಜನಾನುರಾಗಿ ಆಗಿರುವ ಶಾಸಕ ಅಶ್ವಿನ್ ಕುಮಾರ್ ಒಳ್ಳೆಯ ವ್ಯಕ್ತಿತ್ವ ಉಳ್ಳವರು.ಪಕ್ಷಾಂತರಕ್ಕಾಗಿ ಅನ್ಯಪಕ್ಷಗಳಿಂದ ಬೇಡಿಕೆ ಬಂದಾಗಲೂ ಅದನ್ನು ತಿರಸ್ಕರಿಸಿ ಕುಮಾರಸ್ವಾಮಿ ಕೈಬಲಪಡಿಸಿದ ನಿಷ್ಠಾವಂತ, ಸರಳ ಸಜ್ಜನಿಕೆಯ, ಮಿತಭಾಷಿ ,ಸೃಜನಶೀಲ ಅಶ್ವಿನ್ ಕುಮಾರರನ್ನು ಮತ್ತೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುವಂತೆ ಅವರು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಮಹಿಳೆ,ಮುಸ್ಲಿಂ ಮತ್ತು ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ್ದು ಜೆಡಿಎಸ್ ಪಕ್ಷ. ಚಂದ್ರಶೇಖರ್ ಪ್ರಧಾನಿ ಆಗಿದ್ದ ವೇಳೆಯಲ್ಲಿ ಮೀಸಲಾತಿಗಾಗಿ ಬೇಡಿಕೆ ಇಟ್ಟು ಕರ್ನಾಟಕದಲ್ಲಿ ಈ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ್ದೇವೆ. ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದರು.
ಮಹಾನುಭಾವನೊಬ್ಬ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿ ತನ್ನನ್ನು ಬೆಳೆಸಿದ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಾನು ಸಹಿಸಲ್ಲ.ಅಂಥವರಿಗೆ ಶೀಘ್ರದಲ್ಲೇ ತಕ್ಕ ಶಾಸ್ತಿಯಾಗಲಿದೆ.
ನಮ್ಮ ಪಕ್ಷದಲ್ಲಿ ಎಲ್ಲ ಹುದ್ದೆಗಳನ್ನು ಪಡೆದ ಆ ವ್ಯಕ್ತಿ ಈಗ ನಮ್ಮ ಕುಟುಂಬದ ವಿರುದ್ಧ ಲಘುವಾಗಿ ಮಾತನಾಡುವ ನೈತಿಕತೆ ಇಲ್ಲ. ನಮ್ಮ ಪಕ್ಷದ ವಿರುದ್ಧ ಮಾತನಾಡುವುದು ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ತಕ್ಕುದಲ್ಲ ಹೆಸರೇಳದೆ ಮಾರ್ಮಿಕವಾಗಿ ಟೀಕಿಸಿದರು.
ಜಾತ್ಯತೀತ ಜನತಾ ದಳದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಯಿಂ ಮಾತನಾಡಿ,ಐದು ಐತಿಹಾಸಿಕ ದಿನ.ನಾವೆಲ್ಲರು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವ ಉದ್ದೇಶಕ್ಕಾಗಿ ಇಲ್ಲಿ ನೆರೆದಿದ್ದೇವೆ.ಈ ಮೂಲಕ ಈ ರಾಜ್ಯದ ಜ್ವಲಂತ ಸಮಸ್ಯೆಗಳಾದ ಅರೋಗ್ಯ, ವಸತಿ ,ಶಿಕ್ಷಣ, ನೀರಾವರಿ ಬಗೆಹರಿಸಲು ಸೇರಿದ್ದೇವೆ.ನೀರಾವರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ.
ದೇವೇಗೌಡರು ಪ್ರಧಾನಿ ಆಗಿದ್ದ ವೇಳೆಯಲ್ಲಿ ಕರ್ನಾಟಕ ರಾಜ್ಯದ ನೀರಾವರಿಗೆ 1800 ಕೋಟಿ ಅನುದಾನ ಮೀಸಲಿರಿಸಿದ್ದರು.ಕರ್ನಾಟಕಕ್ಕೆ ಹೆಚ್ಚು ಅನುದಾನ ನೀಡಿ ರಸ್ತೆ ,ವಿಮಾನ ನಿಲ್ದಾಣ ಮಾಡಿದ್ದರು.ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯದ ಜನರು ಸ್ವಾಭಿಮಾನದಿಂದ ಪ್ರಾದೇಶಿಕ ಪಕ್ಷಗಳನ್ನು ಅಧಿಕಾರಕ್ಕೆ ತಂದಿದ್ದಾರೆ.ಇಂತಹ ಸ್ವಾಭಿಮಾನ ಕರ್ನಾಟಕದ ಜನತೆಗೆ ಏಕಿಲ್ಲ ಎಂದರು.
ಬಿಜೆಪಿ ಪಕ್ಷಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ.ದೇಶದಲ್ಲಿ ರೈತರಿಗೆ ರಕ್ಷಣೆ ಇಲ್ಲ,ಉತ್ತಮ ಅರೋಗ್ಯ ವ್ಯವಸ್ಥೆ ಇಲ್ಲ.
ಪ್ರವಾಹ ಬಂದ ಸಮಯದಲ್ಲಿ ಪ್ರಧಾನಿ ಕರ್ನಾಟಕಕ್ಕೆ ಬಂದಿಲ್ಲ. ಈಗ ಚುನಾವಣೆ ಸಮಯದಲ್ಲಿ ಕರ್ನಾಟಕಕ್ಕೆ ಬಂದಿರೋದು ಯಾಕೆ.ಬಿಜೆಪಿಯ 25 ಸಂಸದರು ನಿಷ್ಪ್ರಯೋಜಕರು.ಕರ್ನಾಟಕದ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಮುಂದೆ ಚರ್ಚಿಸಲು ಸಿದ್ದರಿಲ್ಲ ಎಂದು ಆರೋಪಿಸಿದರು.
ಉತ್ತರ ಕರ್ನಾಟಕದಲ್ಲಿ ದೇವೇಗೌಡರಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.ಬಿಜೆಪಿ ಸರ್ಕಾರ ಮುಸ್ಲಿಂರ 4% ಮೀಸಲು ವಾಪಸ್ಸು ಪಡೆದಿದ್ದಾರೆ.ಆದರೆ,ಇದರ ಬಗ್ಗೆ ನೆಪ ಮಾತ್ರಕ್ಕೆ ಮಾತ್ರ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸುತ್ತಿದೆ.ಮುಸ್ಲಿಂರ ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್ ಪಕ್ಷ ಸುಗ್ರೀವಾಜ್ಞೆ ಮಂಡಿಸದಂತೆ ತಡೆಯುತ್ತಿತ್ತು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಎಸ್.ಎನ್.ಸಿದ್ದಾರ್ಥ ,ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ,ಕ್ಷೇತ್ರ ಅಧ್ಯಕ್ಷ ಚಿನ್ನಸ್ವಾಮಿ ,ವೀರಶೈವ ಮಹದೇವಸ್ವಾಮಿ ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಆರ್ .ಸೋಮಣ್ಣ,ಎಂ.ಯೂಸುಫ್,ಪುರಸಭೆ ಉಪಾಧ್ಯಕ್ಷ ಸೌಭಾಗ್ಯ ಲೋಕೇಶ್,ಮಹಿಳಾ ಜೆಡಿಎಸ್ ಘಟಕ ಅಧ್ಯಕ್ಷೆ ಯಶೋಧಮ್ಮ ,ಶ್ರೀಧರ್ ,ಮಂಜುನಾಥ್ ,ಚಿಕ್ಕಜವರಪ್ಪ ,ಬನ್ನೂರು ನಾಗರಾಜು ,ರಾಜ್ಯ ಕಾರ್ಯದರ್ಶಿ ಬನ್ನೂರು ರಾಮಸ್ವಾಮಿ,ವಿವೇಕ ನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಕಾಶ್,ಮಾಜಿ ಸೋಸಲೆ ಗ್ರಾ .ಪಂ.ಅಧ್ಯಕ್ಷ ಅಣ್ಣಯ್ಯ ಸ್ವಾಮಿ ಇತರರು ಹಾಜರಿದ್ದರು.