ಸರಳ, ಸಜ್ಜನಿಕೆಯ ಗುಣಗಳಿಂದ ಪ್ರೀತಿಪಾತ್ರರಾಗಿದ್ದ ಸುನಂದಾ ದುರುಗೇಶ್; ಸ್ಮರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.8; ಸರಳ, ಸಜ್ಜನಿಕೆಯ ಗುಣಗಳಿಂದ ಬಹುಜನರ ಪ್ರೀತಿಗೆ ಪಾತ್ರರಾಗಿದ್ದ ಸುನಂದ ಅವರು ಓದಿನಿಂದಲೇ ದಮನಿತ ಜನ ಸಮುದಾಯದ, ಅಸಹಾಯಕರಿಗೆ ಧ್ವನಿ ಆಗಬೇಕೆಂದು ಛಲ ಬಿಡದೇ ಕಾನೂನನ್ನು ಓದಿ ನ್ಯಾಯ ದೊರಕಿಸಿಕೊಟ್ಟ ವ್ಯಕ್ತಿತ್ವ ಹೊಂದಿದ್ದರು ಎಂದು ಮಾಜಿ ಸಚಿವ ಹೆಚ್.ಆಂಜನೇಯ ಸ್ಮರಿಸಿದರು.ನಗರದ ಹದಡಿ ರಸ್ತೆಯಲ್ಲಿನ ಕೆ.ಇ.ಬಿ. ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ನ್ಯಾಯವಾದಿ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಸುನಂದ ದುರುಗೇಶ್ ಅವರ ನೆನಪು ನಿರಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಸವಣ್ಣನವರ ಆಶಯದಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಸರ್ವರಿಗೂ ಸಾಮಾಜಿಕ ನ್ಯಾಯ ಸಲ್ಲಬೇಕು ಎನ್ನುವ ಆಶಯ ಅವರದ್ದಾಗಿತ್ತು. ಅದೇ ರೀತಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರ ಧಾರೆಯಿಂದ ಪ್ರಭಾವಿತರಾಗಿ ಸಾಮಾಜಿಕ ಅಸಮತೋಲನ ಒಡೆದು ಹಾಕುವಲ್ಲಿ ಶ್ರಮಪಟ್ಟಿದ್ದರು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಮಾಚಲ ಪ್ರದೇಶದ ವಿಶ್ರಾಂತ ನ್ಯಾಯಾಧೀಶ ಎಲ್. ನಾರಾಯಣ ಸ್ವಾಮಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಉಪನ್ಯಾಸಕ ಪ್ರೊ.ಸಿ.ಕೆ.ಮಹೇಶ್ವರಪ್ಪ, ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‌ಕುಮಾರ್,  ಆರ್.ಎಲ್‌.ಕಾನೂನು ಕಾಲೇಜಿನ ನಿವೃತ್ತ ಪ್ರಾಚಾರ್ಯ ಸೋಮಶೇಖರ್ ಇತರರು ಇದ್ದರು.