ಸರಳ ಶರಣಸಂಸ್ಕೃತಿ ಉತ್ಸವದಲ್ಲಿ ನಡೆದ ಮಹಿಳಾಗೋಷ್ಠಿ


ಚಿತ್ರದುರ್ಗ.ಅ.೨೭; ತಾವಿದ್ದಲ್ಲಿಯೇ ಶರಣ ಸಂಸ್ಕೃತಿ ಉತ್ಸವದಲ್ಲಿ ನಡೆದ ಮಹಿಳಾ ಗೋಷ್ಠಿಯಲ್ಲಿ ಉದ್ವೇಗದಿಂದಾಗುವ ದುಷ್ಪರಿಣಾಮಗಳು ಮತ್ತು ಪರಿಹಾರದ ಕುರಿತು ನಡೆದ ಮಹಿಳಾ ಗೋಷ್ಠಿಯ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು, ಸ್ತ್ರೀಯರಿಗೂ ಕೂಡ ಜೀವ ಇದೆ. ಆಕೆಯನ್ನು ತಮ್ಮಂತೆಯೇ ನೋಡಿಕೊಳ್ಳಬೇಕು ಎನ್ನುವ ಜೀವಕಾರುಣ್ಯ ಇರಬೇಕು. ಜೀವಕಾರುಣ್ಯ ಇರುವವರು ಎಂದಿಗೂ ಕೂಡ ಸ್ತ್ರೀಯರ ಮೇಲೆ ದೌರ್ಜನ್ಯ ಎಸಗುವುದಿಲ್ಲ. ಸ್ತ್ರೀ ಪುರುಷ ಬೇರೆ ಬೇರೆ ಜಾತಿ ಅಲ್ಲ, ಇಬ್ಬರೂ ಸೇರಿದರೆ ಮಾತ್ರ ಮಾನವ ಜಾತಿ ನಿರ್ಮಾಣವಾಗುತ್ತದೆ ಎಂದರು.ಸಾಹಿತಿ, ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಮಾತನಾಡಿ, ಹೆಣ್ಣುಮಕ್ಕಳಿಗೆ ಯಾವ ವಿದ್ಯೆ, ಉದ್ಯೋಗ, ಆರ್ಥಿಕ ಸ್ವಾವಲಂಬನೆಯೂ ಕೂಡ ಘನತೆ, ಗೌರವವನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಸಮಾಜದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದರೆ ದೌರ್ಜನ್ಯ ಎಸಗಿದರ ವಿರುದ್ಧ ಅಟ್ರಾಸಿಟಿ ಕಾಯಿದೆ ಕಾನೂನಿನ ಮೂಲಕ ಶಿಕ್ಷೆ ನೀಡಲಾಗುತ್ತದೆ. ಅದೇ ರೀತಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಹಾಗೂ ಅವರ ವಿರುದ್ಧ ಅಶ್ಲೀಲವಾಗಿ, ಅವ್ಯಾಚವಾಗಿ ಮಾತನಾಡುವವರ ವಿರುದ್ಧ ಕೂಡ ಅಟ್ರಾಸಿಟಿ ಕಾಯಿದೆ ಮೂಲಕ ಶಿಕ್ಷೆ ವಿಧಿಸುವ ಕಾನೂನು ಜಾರಿಯಾಗಬೇಕು ಎಂದು ಹೇಳಿದರು.
ಅಖಿಲ ಭಾರತೀಯ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಬಿ.ವೈ.ಅರುಣಾದೇವಿ ಮಾತನಾಡಿ, ತಂದೆತಾಯಿಗಳು ಮಕ್ಕಳಿಗೆ ಶಿಕ್ಷಣ ನೀಡಿದರೆ ಮಕ್ಕಳು ಬೆಳೆಯಲು ಅವಕಾಶವಾಗುತ್ತದೆ. ನಾವು ಎಲ್ಲದರಲ್ಲಿಯೂ ದೈವತ್ವವನ್ನು ಕಾಣುತ್ತೇವೆ. ಅದರ ಮೂಲಕ ಬದುಕಿನ ನೆಮ್ಮದಿ ಕಂಡುಕೊಳ್ಳುತ್ತಿದ್ದೇವೆ ಮತ್ತು ಆ ನೆಮ್ಮದಿಯನ್ನು ಎಲ್ಲರಿಗೂ ಹಂಚುತ್ತಿದ್ದೇವೆ ಎಂದರು. ತಂದೆ-ತಾಯಿ ಮಕ್ಕಳಿಗೆ ಎಷ್ಟೇ ಸಂಸ್ಕಾರ ನೀಡಿದರೂ ಕೆಲವು ಒಳ್ಳೆಯ ಪುಸ್ತಕಗಳನ್ನು ಓದಿದಾಗ ನಮ್ಮಲ್ಲಿ ಜವಾಬ್ದಾರಿ ಜಾಗೃತಗೊಳ್ಳುತ್ತದೆ. ನಾವು ಕಾನೂನಿನಿಂದ ಸಂಸ್ಕಾರ ಕಲಿಸಲಾಗುವುದಿಲ್ಲ. ಮನೆಯಲ್ಲಿಯೇ ಮಕ್ಕಳಿಗೆ ಸಂಸ್ಕಾರ, ಒಳ್ಳೆಯ ಮನಸ್ಥಿತಿಯನ್ನು ಬೆಳೆಸಬೇಕು. ಕುಟುಂಬ ವ್ಯವಸ್ಥೆ ಶುದ್ಧಿಯಾದಾಗ ಸಮಾಜ ಸುಸಂಸ್ಕೃತವಾಗುತ್ತದೆ ಎಂದರು. ಜನಪ್ರಿಯ ವಾಗ್ಮಿ ಪ್ರಶಸ್ತಿ ವಿಜೇತೆ ಮಂಡ್ಯದ ಮೇಘನಾ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿ ಉತ್ಸವದ ಗೌರಾವಾಧ್ಯಕ್ಷರಾದ ಶ್ರೀ ಭೋವಿಗುರುಪೀಠದ ಜ.ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ಚಿಕ್ಕಮಗಳೂರು ಬಸವಕೇಂದ್ರದ ಮಲ್ಲೇಗೌಡ, ಗುರುಸ್ವಾಮಿ ಸೇರಿದಂತೆ ವಿವಿಧ ಮಠಾಧೀಶರು ಇದ್ದರು. ಅಕ್ಕನಾಗಮ್ಮ ಅವರು ಸ್ವಾಗತ ಕೋರಿದರು. ಆಳ್ವಾಸ್ ಪ್ರತಿಭೆ ಬಸವನ ಬಾಗೇವಾಡಿಯ ಶ್ರೀದೇವಿ ಎನ್.ರೂಡಿಗಿ, ನಾಟ್ಯರಂಜಿನಿ ನೃತ್ಯ ಕೇಂದ್ರ ಹಾಗೂ ಮುರುಘಾಮಠದ ಬಸವ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
-೨