ಸರಳ ರೀತಿಯಿಂದ ಹನುಮಾನ್ ಜಯಂತಿ

ಕಲಬುರಗಿ ಏ 27: ನಗರದಲ್ಲಿ ಇಂದು ಹನುಮಾನ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ನಗರದ ಪ್ರಸಿದ್ಧ ಕೋರಂಟಿ ಹನುಮಾನ ದೇವಸ್ಥಾನದ ಪ್ರಮುಖ ದಾರವನ್ನು ಮುಚ್ಚಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಯಿತು. ಹೀಗಾಗಿ ದೇವಸ್ಥಾನಕ್ಕೆ ಬಂದ ಭಕ್ತರು ದ್ವಾರಕ್ಕೆ ನಮಸ್ಕರಿಸಿ ಹೋಗುತ್ತಿರುವ ದೃಶ್ಯ ಕಂಡು ಬಂತು.ದೇವಸ್ಥಾನದಲ್ಲಿ ಅರ್ಚಕರು ಸರಳ ರೀತಿಯಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದರು.
ಕಲಬುರಗಿ ಕರುಣೇಶ್ವರ ನಗರದ ಜೈವೀರ ಹನುಮಾನ ಮಂದಿರ,ಹೊಸ ಜೇವರಗಿ ರಸ್ತೆಯ ರಾಮಮಂದಿರ,ಬೃಂದಾವನ ಕಾಲೋನಿಯ ಹನುಮಾನ ಮಂದಿರ,ಲಾಲಗಿರಿಯ ಹನುಮಾನ ಮಂದಿರ, ಹಳೆ ಜೇವರಗಿ ರಸ್ತೆಯ ಹನುಮಾನ ಮಂದಿರ ಸೇರಿದಂತೆ ನಗರದ ವಿವಿಧ ಕಡೆ ಅತ್ಯಂತ ಸರಳ ರೀತಿಯಲ್ಲಿ ಶ್ರೀ ರಾಮ ಭಕ್ತ ಹನುಮ ಜಯಂತಿಯನ್ನು ಆಚರಿಸಲಾಯಿತು.
ಜಿಲ್ಲೆಯ ಮೋತಕಪಲ್ಲಿಯ ಬಲಭೀಮಸೇನ ಮಂದಿರ,ಯಡ್ರಾಮಿ ತಾಲೂಕಿನ ದುಮ್ಮದ್ರಿ ವರಹಳ್ಳೇರಾಯ ದೇವಸ್ಥಾನ,ನೆಲೋಗಿ,ರಾಸಣಗಿ ಮೊದಲಾದ ಕಡೆ ಸರಳ ರೀತಿಯಿಂದ ಆಂಜನೇಯಸ್ವಾಮಿ ಜಯಂತಿ ಆಚರಿಸಲಾಯಿತು.