ಸರಳ ರೀತಿಯಲ್ಲಿ ಡಾ.ಬಾಬುಜಗಜೀವನರಾಂ ಜಯಂತಿ ಆಚರಣೆ

ವಿಜಯಪುರ, ಏ.06: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಡಾ.ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಡಳಿತದ ವತಿಯಿಂದ ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರ ಪುಷ್ಪಾರ್ಚಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಅತ್ಯಂತ ಅರ್ಥಪೂರ್ಣ ಹಾಗೂ ಸರಳವಾಗಿ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭಧಲ್ಲಿ ಮಾತನಾಡಿದ ಅವರು, ಜಗಜೀವನ ರಾಂ ಅವರು ಸಂಸದರಾಗಿ, ಕಾರ್ಮಿಕ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಸಿರು ಕ್ರಾಂತಿಯ ಹರಿಕಾರ ಎಂದೇ ಹೆಸರು ಪಡೆದ ಅವರು, ನಮ್ಮ ದೇಶದ ಆಹಾರ ಉತ್ಪಾದನೆ ಕುಂಠಿತ ಕಂಡು ಇಡೀ ದೇಶದಲ್ಲಿ ಆಹಾರ ಉತ್ಪಾದನೆಯಲ್ಲಿ ಒಂದು ಹಸಿರು ಕ್ರಾಂತಿಯನ್ನೇ ಮಾಡಿದ ಅವರು ದೇಶ-ವಿದೇಶಗಳಿಂದ ಆಹಾರ ಉತ್ಪನ್ನಗಳನ್ನು ಆಮದಿನ ಪ್ರಮಾಣವನ್ನು ತಗ್ಗಿಸಿದರು. ಅವರು ಮಾಡಿದ ಎಲ್ಲ ಕರ್ತವ್ಯಗಳಲ್ಲಿ ಅವರ ನಾಯಕತ್ವ ಎದ್ದು ಕಾಣುತ್ತಿತ್ತು. ಅವರು ಬಾಲ್ಯದಿಂದಲೇ ಹುಟ್ಟು ಹೋರಾಟಗಾರಾಗಿದ್ದರು. ಮಾತೃ ಪ್ರೇಮಿ, ಮಹಾಮಾನವತಾವಾದಿ, ಸಮಾಜದಲ್ಲಿ ಸಮಾನತೆ ತರಬೇಕೆಂದು ಅವಿರತ ಶ್ರಮಿಸಿದ ಮಹಾನ್ ನಾಯಕರ ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ನಗರದಲ್ಲಿರುವ ಡಾ.ಬಾಬು ಜಗಜೀವನರಾಂ ಪುತ್ಥಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು