ಸರಳ ಮದುವೆಯಿಂದ ಆದರ್ಶ ಮೆರೆಯಬೇಕು: ಎಂ.ಎಸ್.ದಿವಾಕರ್


ಸಂಜೆವಾಣಿ ವಾರ್ತೆ
ವಿಜಯನಗರ: ಇತ್ತೀಚಿಗೆ ಮದುವೆ ಎಂಬುದು ಅದ್ದೂರಿ, ಆಡಂಬರ, ತೋರಿಕೆಯ ಕಾರ್ಯಕ್ರಮಗಳಾಗಿ ಪರಿವರ್ತನೆಯಾಗಿದ್ದು, ಮದುವೆ ವಾರ್ಷಿಕೋತ್ಸವಕ್ಕೂ ಮುನ್ನವೇ ಕೆಲವರು ವಿಚ್ಛೇದನಕ್ಕೆ ಮುಂದಾಗುತ್ತಿರುವುದು ಕಳವಳಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ಬಸವಾದಿ ಶರಣರು ತೋರಿದ ಆದರ್ಶಮಯ ದಾರಿಯಲ್ಲಿ ಸತಿ-ಪತಿಗಾಗಿ ಬದುಕಿ, ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ನವ ದಂಪತಿಗೆ ಕಿವಿಮಾತು ಹೇಳಿದರು.
ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ 891ನೇ ಜಯಂತೋತ್ಸವ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ಹೊಸಪೇಟೆಯ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನಮಠದ ಲಿಂ.ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳ ವೇದಿಕೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ 51ನೇ ಸರ್ವ ಧರ್ಮ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಹೇಮಕೂಟ ಕಿಂಡರ್ ಶಾಲೆಯನ್ನು ಉದ್ಘಾಟಸಿ ಅವರು ಮಾತನಾಡಿದರು.
ದಂಪತಿಗಳಲ್ಲಿ ಮಾನಸಿಕ ಸಾಮರಸ್ಯ, ಒಮ್ಮತದ ನಿರ್ಧಾರ, ಪರಸ್ಪರ ಕಾಳಜಿ ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಆದರೆ, ಕೆಲವರು ಅಳಿಯನಿಗೆ ಮಗನಂತೆ ಪ್ರೀತಿ ತೋರುವುದು ಒಳ್ಳೆಯ ಬೆಳವಣಿಗೆ. ಅದರಂತೆ ಗಂಡನ ಮನೆಯಲ್ಲಿ ಹೆಣ್ಣು ಮಗಳಿಗೆ ಅತ್ತೆ, ಮಾವನಿಂದ ಮಾತೃ ವಾತ್ಸಲ್ಯ ಸಿಗಬೇಕು. ಆದರೆ, ಮಗಳು- ಸೊಸೆ ಎಂಬ ಭಿನ್ನ ಧೋರಣೆ ಹೆಚ್ಚುತ್ತಿದೆ. ಕುಟುಂಬದಲ್ಲಿ ನಾನಾ ಸಮಸ್ಯೆ, ಸಂಕಷ್ಟಗಳು ಎದುರುಗುತ್ತವೆ. ಅಂತಹದಕ್ಕೆ ಹೆತ್ತವರು ಅವಕಾಶ ನೀಡದೇ, ಮಕ್ಕಳ ವೈವಾಹಿಕ ಜೀವನವನ್ನು ತಿದ್ದಿ, ತೀಡಿ ಯಶಸ್ವಿ ಬದುಕಿಗೆ ಮಾರ್ಗದರ್ಶನ ಮಾಡಬೇಕು. ಅದಕ್ಕೆ ಪ್ರತಿಯಾಗಿ ಸೊಸೆಯವರು ಮನೆ ದೀಪ ಬೆಳಗಿಸಬೇಕು. ವೃದ್ಧ ಅತ್ತೆ- ಮಾವನ ಆಹಾರ, ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಅಲ್ಲದೇ, ಆಡಂಬರ, ಅದ್ದೂರಿ ಮದುವೆ ಸಮಾರಂಭಗಳಿಂದ ಕುಟುಂಬಕ್ಕೆ ಆರ್ಥಿಕ ಹೊರೆಯಾಗಿ, ಸಾಲದ ಸುಳಿಗೆ ಸಿಲುಕುವಂತಾಗಿದೆ. ಇಂದಿನ ದುಬಾರಿ ದುನಿಯಾದಲ್ಲಿ ದುಂದು ವೆಚ್ಚದ ಮದುವೆಗಳು ಮುಂದೆ ಸಾಲದ ಹೊರೆಯಾಗುತ್ತದೆ. ಹೀಗಾಗಿ ಮಠ, ಮಾನ್ಯಗಳ ಅಂಗಳದಲ್ಲಿ ಆಯೋಜಿಸುವ ಸಾಮೂಹಿಕ ವಿವಾಹದ ಲಾಭ ಪಡೆದುಕೊಳ್ಳಬೇಕು. ಬಸವಾದಿ ಶರಣರು ತೋರಿದ ಸರಳ ಮದುವೆಗಳಲ್ಲಿ ದಾಂಪತ್ಯಕ್ಕೆ ಅಡಿಯಿಟ್ಟು, ಪ್ರೀತಿ, ಅಂತಃಕರಣ ಹಾಗೂ ಆದರ್ಶಮಯ ಬದುಕು ಕಟ್ಟಿಕೊಳ್ಳಬೇಕು ಎಂದು ಅರ್ಥಗರ್ಭಿತವಾಗಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಮಶಿವಮೂರ್ತಿ ಮಾತನಾಡಿ, ಮಠ, ಮಾನ್ಯಗಳ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗೆ ಸಮುದಾಯದ ಸಹಭಾಗಿತ್ವದ ಅಗತ್ಯವಿದೆ. ದಶಕಗಳ ಹಿಂದೆ ಸರ್ಕಾರಿ ಶಾಲೆಗಳೇ ಇಲ್ಲದ ಸಂದರ್ಭದಲ್ಲಿ ಮಠಗಳು ಅಕ್ಷರ ಕ್ರಾಂತಿ ಮಾಡಿವೆ. ಸರ್ಕಾರಗಳು ಮಾಡದೇಕಾದ ಕೆಲಸವನ್ನು ಮಠಗಳು ಮಾಡಿ ತೋರಿಸಿದ್ದಲ್ಲದೇ, ಶ್ರೀ ಸಾಮಾನ್ಯರಲ್ಲಿ ಶಿಕ್ಷಣದ ದೀವಿಗೆ ಹೊತ್ತಿಸಿದೆ. ನಾಡಿನಲ್ಲಿ ಶೈಕ್ಷಣಿಕ ಪ್ರಗತಿಗೆ ಮಠಗಳ ಕೊಡುಗೆ ಅಪಾರ ಎಂದು ಕೊಂಡಾಡಿದರು.
50 ವರ್ಷಗಳ ಹಿಂದೆ ಇದ್ದ ವೈಧಿಕ ಪತ್ರಿಕೆಗಳು ಇಂದು ನಶಿಸಿ ಹೋಗಿವೆ. ಜಗದ್ಗುರು ಕೊಟ್ಟೂರು ಸ್ವಾಮಿ ಮಠದಿಂದ ಹೊರತರುತ್ತಿದ್ದ ಅನೇಕ ಹೊತ್ತಿಗೆಗಳು ಕನ್ನಡ ವಿಶ್ವವಿದ್ಯಾಲಯದ ಆಕರ ಪುಸ್ತಕಗಳಾಗಿವೆ. ಸಂಶೋಧನಾ ಪುಸ್ತಕ ಮತ್ತು ಪತ್ರಿಕೆಗಳು ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಶ್ರೀಮಠದಿಂದ ಹೊರ ತರುತ್ತಿರುವ `ಹೇಮಕೂಟ’ ತ್ರೈಮಾಸಿಕ ಪತ್ರಿಕೆ ಆಶಾದಾಯಕವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಸಾನ್ನಿಧ್ಯ ವಹಿಸಿ ಜಗದ್ಗುರು ನಿರಂಜನ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಲಿಂಗಾಯತ ವಿರಕ್ತ ಮಠಗಳು ಇಲ್ಲದಿದ್ದರೆ ಈ ನಾಡಿನಲ್ಲಿ ಸಾಕ್ಷರತೆಯ ದಿಕ್ಕು, ದೆಸೆ ಊಹೆಗೂ ನಿಲುಕದು. ಆದರೆ, ಮಠ, ಮಾನ್ಯಗಳ ಪರಿಶ್ರಮದಿಂದ ಈ ನಾಡು, ಸಮಾಜ ಸುಶಿಕ್ಷಿತವಾಗಿದೆ. ಇಂದಿನ ಸಾಮೂಜಿಕ, ಸರಳ ವಿವಾಹ ಪದ್ಧತಿಗೆ 12ನೇ ಶತಮಾನದಲ್ಲಿ ಬಸವಾದಿ ಶರಣರು ಬೀಜ ಬಿತ್ತಿದ್ದರು. ವಿಶ್ವಗುರು ಬಸವಣ್ಣನವರ ತತ್ವದಡಿ ಮುನ್ನಡೆಯುತ್ತಿರುವ ಕೊಟ್ಟೂರುಸ್ವಾಮಿ ಮಠದಿಂದ ಪ್ರತೀ ವರ್ಷ ಸರ್ವ ಧರ್ಮ ಸಮೂಹಿಕ ವಿವಾಹಗಳನ್ನು ಏರ್ಪಡಿಸುತ್ತಿದ್ದು, ಸಾವಿರಾರು ಜನರು ವಿವಾಹ ಬಂಧನಕ್ಕೊಳಗಾಗಿದ್ದಾರೆ. ಗೃಹಸ್ಥಾಶ್ರಮದ ತಿರುಳು ತಿಳಿದು ನಡೆದರೆ ಸಾಕು ಬದುಕು ಸಾರ್ಥಕವಾಗುತ್ತದೆ ಎಂದು ನವ ದಂಪತಿಗಳಿಗೆ ಸಲಹೆ ನೀಡಿದರು.
ಕರೇಗುಡ್ಡ ಹೊರೇಮಠದ ಮಹಾಂತಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಶ್ರೀಧರಗಡ್ಡೆ ಶಾಖಾ ಮಠದ ಮರಿಕೊಟ್ಟೂರು ದೇಶಿಕರು ಸಮ್ಮುಖ ವಹಿಸಿದ್ದರು.
ವೇದಿಕೆ ಮೇಲೆ ಶ್ರೀ ಕೊಟ್ಟೂರುಸ್ವಾಮಿ ಕಲ್ಯಾಣ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಾಲಿ ಸಿದ್ದಯ್ಯಸ್ವಾಮಿ, ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ಕೋಶಾಧ್ಯಕ್ಷ ಕೆ.ಗಂಗಾಧರಪ್ಪ, ಸಮಾಜದ ಪ್ರಮುಖರಾದ ಕೆ.ಬಿ.ಶ್ರೀನಿವಾಸರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಅದ್ದೂರಿ ಮೆರವಣಿಗೆ
ಇದಕ್ಕೂ ಮುನ್ನ ವಿಶ್ವಗುರು ಬಸವೇಶ್ವರ ಸರ್ಕಲ್‍ನಲ್ಲಿ ಅಶ್ವಾರೂಢ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀಮಠದ ವರೆಗೆ ಅಣ್ಣ ಬಸವಣ್ಣನ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. ವವಿಇಧ ಸಮಾಜಗಳ ಪ್ರಮುಖರು, ಬಸವ ಬಳಗ, ಅಕ್ಕನ ಬಳಗ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.