ಸರಳ ಈದ್-ಮಿಲಾದ್ ಆಚರಣೆಗೆ ಸೂಚನೆ

ವಿಜಯಪುರ, ಅ.೩೦- ರಾಜ್ಯದಾದ್ಯಂತ ಕೋವಿಡ್-೧೯ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೋವಿಡ್-೧೯ ನ ಶಿಷ್ಟಾಚಾರವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಸರಕಾರವು ನಿರ್ಧರಿಸಿದ್ದು, ಅದರ ಮೇರೆಗೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ, ಹಬ್ಬದ ಮೆರವಣಿಗೆ, ಸಾಮೂಹಿಕ ಅನ್ನದಾನ, ಮುಂತಾದವುಗಳನ್ನು ಆಚರಿಸದೇ, ಮನೆಗಳಲ್ಲಿ ಹಾಗೂ ಮಸೀದಿಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸಿ, ಸ್ಯಾನಿಟೈಸ್‌ಡ್ ಮಾಡುವ ಮೂಲಕ ಹಬ್ಬವನ್ನು ಸರಳವಾಗಿ ಆಚರಿಸಬೇಕೆಂದು, ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಡಿ.ಮಂಜುನಾಥ್ ತಿಳಿಸಿದರು.
ಅವರು ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಈದ್-ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಹಿಂದು-ಮುಸ್ಲಿಂ ಸೌಹಾರ್ದ ಸಭೆಯಲ್ಲಿ ಮಾತನಾಡುತ್ತಿದ್ದರು.
ಮೊಹಲ್ಲಾಗಳಲ್ಲಿ, ದರ್ಗಾಗಳಲ್ಲಿ, ಕವಾಲಿ, ಸಾಮೂಹಿಕ ಪ್ರಾರ್ಥನೆ, ಸಾಂಸ್ಕೃತಿಕ ಸಭೆ-ಸಮಾರಂಭಗಳು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ದರ್ಗಾ ಹಾಗೂ ಮಸೀದಿಗಳಿಗೆ ಪ್ರತಿಯೊಬ್ಬರೂ ವಯಕ್ತಿಕವಾಗಿ ತೆರಳಿ, ಪೂಜೆ, ಪ್ರಾರ್ಥನೆಗಳನ್ನು ನೆರವೇರಿಸಿಕೊಂಡು, ಬರಬೇಕೆಂದು ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳು, ಡಿಜಿಟಲ್ ಸೌಂಡ್ ಸಿಸ್ಟಂಗಳನ್ನು ನಿಷೇಧಿಸಲಾಗಿದ್ದು, ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಿದ್ದು, ಮಸೀದಿಗಳ ದ್ವಾರದಲ್ಲಿ ಕೈ ತೊಳೆಯಲು ಸೋಪು ಹಾಗೂ ಸ್ಯಾನಿಟೈಸರ್ ಇಟ್ಟಿರಬೇಕೆಂದು, ಪ್ರತಿಯೊಬ್ಬರೂ ೬ ಅಡಿ ಅಂತರ ಕಾಯ್ದುಕೊಳ್ಳಬೇಕೆಂದು, ಸೂಚಿಸಿದರು.
ಟೌನ್ ಕಸಾಪ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅನೀಸ್-ಉರ್-ರೆಹಮಾನ್ ಮಾತನಾಡಿ, ಮಸೀದಿಗಳ ಮುಂಭಾಗ ಅನ್ನದಾನ ನಡೆಸಲು ಅನುಮತಿ ನೀಡಬೇಕೆಂದು, ಮನವಿ ಸಲ್ಲಿಸಿದಾಗ ಆಹಾರದ ಪೊಟ್ಟಣಗಳನ್ನು ಸಿದ್ದಪಡಿಸಿ, ಮನೆಗಳಿಗೆ ಹಾಗೂ ಬಡವರಿಗೆ, ಹಂಚಬೇಕೆಂದು ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು, ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಸೂಚಿಸಿದರು.
ಬಿ.ಜೆ.ಪಿ ಟೌನ್ ಮಾಜಿ ಅಧ್ಯಕ್ಷ ರಾಮುಭಗವಾನ್ ಮಾತನಾಡಿ, ಪಟ್ಟಣದಲ್ಲಿ ದಶಕಗಳ ಕಾಲದಿಂದಲೂ ಮುಸ್ಲಿಂ ಹಾಗೂ ಹಿಂದುಗಳು ಸಹೋದರರಂತೆ ಎಲ್ಲಾ ಹಬ್ಬ-ಹರಿದಿನಗಳಲ್ಲಿ ಸ್ನೇಹ, ಸೌಹಾರ್ದಗಳಿಂದ ಆಚರಿಸಿಕೊಂಡು ಬರುತ್ತಿದ್ದು, ಇದೇ ರೀತಿ ಮುಂದುವರೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಕಾರ್ಯದರ್ಶಿ ಕೆ.ಬಾಬು. ಖಜಾಂಚಿ ಆಸೀಫ್ ಪಾಷ, ಸದಸ್ಯ ಅಕ್ರಂ ಪಟೇಲ್, ಜೆ.ಡಿ.ಎಸ್ ಅಲ್ಪಸಂಖ್ಯಾತ ಘಟಕದ ಟೌನ್ ಅಧ್ಯಕ್ಷ ಸಾದತ್, ಟಿಪ್ಪು ನಗರದ ಸಬಾ ಮಸೀದಿಯ ಅಧ್ಯಕ್ಷ ಪ್ಯಾರೂಸಾಬ್, ಈದ್ ಮಿಲಾದ್ ಸಮಿತಿಯ ಮಹಬೂಬ್ ಪಾಷ, ಮೌಲಾ, ಬಿಜೆಪಿ ಅಲ್ಪಸಂಖ್ಯಾತ ಘಟಕದ ಟೌನ್ ಅಧ್ಯಕ್ಷ ಶಕೀಲ್ ಅಹಮ್ಮದ್, ಕ.ರ.ವೇ ಟೌನ್ ಅಧ್ಯಕ್ಷ ಮಹೇಶ್, ಮತ್ತಿತರರು ಉಪಸ್ಥಿತರಿದ್ದರು.