ಸರಳವಾಗಿ ಶ್ರೀ ಬಾಲಚಂದ್ರ ಬಸವೇಶ್ವರಸ್ವಾಮಿಯ ಓಕಳಿ ಹಬ

ಪಿರಿಯಾಪಟ್ಟಣ: ತಾಲ್ಲೂಕಿನ ಬೆಕ್ಕರೆ ಗ್ರಾಮದ ಶ್ರೀ ಬಾಲಚಂದ್ರ ಬಸವೇಶ್ವರಸ್ವಾಮಿಯ ಓಕಳಿ ಹಬ್ಬ ಈ ಬಾರಿ ಕೊರೊನಾ ಸೋಂಕಿನ ಕಾರಣ ಸರಳವಾಗಿ ಗ್ರಾಮಸ್ಥರ ಸಮ್ಮುಖ ನಡೆಯಿತು.
ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಎರಡು ದಿನಗಳ ಕಾಲ ನಡೆದ ಓಕಳಿ ಹಬ್ಬದ ವಿಶೇಷವಾಗಿ ಸೋಮವಾರ ರಾತ್ರಿ ಕುಶಾಲನಗರದ ಕಾವೇರಿ ನದಿಯಿಂದ ಒಳಾಗ್ನಿ (ಗಂಗಾಜಲ) ತರುವ ಮೂಲಕ ಚಾಲನೆ ದೊರೆಯಿತು, ನಂತರ ಗ್ರಾಮದ ಹೊರವಲಯದಿಂದ ಶ್ರೀ ಮೂರೂರಮ್ಮ ತಾಯಿ ದೇವರ ಕಳಸ ತಂದು ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು, ಮಂಗಳವಾರ ಬೆಳಿಗ್ಗೆ ಪುಟಾಣಿ ಹೆಣ್ಣುಮಕ್ಕಳು ಗ್ರಾಮದ ಹೊರವಲಯದ ಗಂಗಾಸ್ಥಳದಿಂದ ಗಂಗೆಯನ್ನು ಹೊತ್ತು ವಿಶೇಷ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಓಕಳಿ ಕೊಳ ತುಂಬಿಸಿದರು, ಮಧ್ಯಾಹ್ನ ಶ್ರೀ ಬಾಲಚಂದ್ರ ಬಸವೇಶ್ವರ ಸ್ವಾಮಿಯ ಉತ್ಸವ ಮೆರವಣಿಗೆಗೆ ಚಾಲನೆ ದೊರೆತ ನಂತರ ಗ್ರಾಮದ ಚಿಣ್ಣರು ಮತ್ತು ಯುವಕರು ಓಕಳಿ ಆಡಿ ಸಂಭ್ರಮಿಸಿದರು, ಈ ವೇಳೆ ಭಕ್ತಾದಿಗಳಿಗೆ ಪಾನಕ ಹಾಗೂ ಮಜ್ಜಿಗೆ ವಿತರಿಸಲಾಯಿತು, ಸಂಜೆ ಶ್ರೀ ಬಾಲಚಂದ್ರ ಬಸವೇಶ್ವರ ಸ್ವಾಮಿಯ ಪಲ್ಲಕ್ಕಿ ಹಾಗೂ ಮೂರೂರಮ್ಮ ತಾಯಿಯ ಉತ್ಸವವನ್ನು ಪ್ರಮುಖ ಬೀದಿಗಳಲ್ಲಿ ವಿಶೇಷ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ ಪ್ರತಿ ಮನೆಗಳ ಬಳಿ ಪೂಜೆ ಸಲ್ಲಿಸಿದ ನಂತರ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ತರುವ ಮೂಲಕ ಎರಡು ದಿನಗಳ ಕಾಲ ನಡೆದ ಓಕಳಿ ಹಬ್ಬ ಮುಕ್ತಾಯಗೊಂಡಿತು, ಗ್ರಾಮದ ನವಗ್ರಹ, ಶ್ರೀಕಾಳಿಕಾಂಬ, ಶ್ರೀಲಕ್ಷ್ಮೀದೇವಿ, ಮೂರುರಮ್ಮ ದೇವಾಲಯಗಳಲ್ಲಿಯೂ ಸಹ ವಿಶೇಷ ಪೂಜೆಗಳು ಜರುಗಿದವು.
ಪೂಜಾ ಕೈಂಕರ್ಯಗಳನ್ನು ಅರ್ಚಕರಾದ ಬಿ.ವಿ ಬಸವರಾಜ್, ನಟರಾಜ್, ರಕ್ಷಿತ್ ರಾಜ್ ಹಾಗೂ ಬಿ.ಸಿ ವಿಶ್ವನಾಥ್ ನೆರವೇರಿಸಿದರು, ಈ ಸಂದರ್ಭ ಗ್ರಾಮದ ಯಜಮಾನರು, ವಿವಿಧ ಕೋಮುಗಳ ಯಜಮಾನರು, ಗ್ರಾ.ಪಂ ಹಾಲಿ ಹಾಗೂ ಮಾಜಿ ಸದಸ್ಯರು, ದೇವಾಲಯ ಸಮಿತಿ ಅಧ್ಯಕ್ಷರು ಹಾಗು ಪದಾಧಿಕಾರಿಗಳು, ಗ್ರಾಮದ ವಿವಿಧ ಸಂಘಗಳ ಅಧ್ಯಕ್ಷ ಹಾಗು ಸದಸ್ಯರು, ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು.
ಹರಕೆ ಸೇವೆಗಳಿಗೆ ನಿರ್ಬಂಧ: ಪ್ರತಿವರ್ಷ ಯುಗಾದಿ ಹಬ್ಬ ಕಳೆದ ವಾರಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ವಿವಿಧೆಡೆಯ ಸಾವಿರಾರು ಭಕ್ತಾಧಿಗಳ ಸಮ್ಮುಖ ಓಕಳಿ ಹಬ್ಬವನ್ನು ವಿಜ್ರಂಭಣೆಯಿಂದ ಎರಡು ದಿನಗಳ ಕಾಲ ಆಚರಿಸಲಾಗುತ್ತಿತ್ತು ಆದರೆ ಈ ಬಾರಿ ಕೊರೊನಾ ಸೋಂಕು ದಿನೇದಿನೆ ಹೆಚ್ಚುತ್ತಿರುವ ಕಾರಣ ಗ್ರಾಮದ ಯಜಮಾನರು, ವಿವಿಧ ಕೋಮುಗಳ ಯಜಮಾನರು, ಮುಖಂಡರು ಹಾಗು ಗ್ರಾಮಸ್ಥರೆಲ್ಲರೂ ಚರ್ಚಿಸಿ ವಿಜೃಂಭಣೆಯ ಆಚರಣೆಗೆ ತಡೆಯೊಡ್ಡಿ ಹಬ್ಬದ ದಿನ ನಡೆಯುತ್ತಿದ್ದ ಉರುಳು ಸೇವೆ, ಪಂಜಿನ ಸೇವೆ, ಬಾಯಿಬೀಗ, ದನಗಳ ಓಟದ ಹರಕೆ, ಜಾತ್ರೆ ಮಳಿಗೆಗಳು ಮತ್ತು ಹೊರಗಿನ ಭಕ್ತಾದಿಗಳಿಗೆ ನಿರ್ಬಂಧ ಹೇರಿ ಕೇವಲ ಗ್ರಾಮಸ್ಥರ ಸಮ್ಮುಖ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಸರಳವಾಗಿ ಆಚರಿಸಲಾಯಿತು.