ಸರಳವಾಗಿ ನಡೆದ ಐತಿಹಾಸಿಕ ವೇಣುಗೋಪಾಲ ಸ್ವಾಮಿ ಜಾತ್ರೆ

ಸುರಪುರ : ಕೊರೊನಾ ಹಾವಳಿಯಿಂದಾಗಿ ಐತಿಹಾಸಿಕವಾದ ಸುರಪುರದ ಶ್ರೀ ವೇಣುಗೋಪಾಲ ಸ್ವಾಮಿಯ ಹಾಲೋಕಳಿ ಜಾತ್ರೆಯನ್ನು ತುಂಬಾ ಸರಳವಾಗಿ ಆಚರಿಸಲಾಯಿತು.

ಪ್ರತಿವರ್ಷ 50 ಸಾವಿರ ವರೆಗೂ ಸೇರುತ್ತಿದ್ದ ಭಕ್ತಾದಿಗಳು ಈ ವರ್ಷ ಕೇವಲ ಒಂದೆರಡು ಸಾವಿರ ಜನ ಸೇರಿರುವುದು ಮಾತ್ರ ಕಂಡುಬಂತು.

ಜಾತ್ರೆಯ ಅಂಗವಾಗಿ ಬೆಳಗ್ಗೆ ಶ್ರೀ ವೇಣುಗೋಪಾಲ ಸ್ವಾಮಿಗೆ ಅಲಂಕಾರಗೊಳಿಸಿ ಪೂಜಾ ಆರಾಧನೆ ಕೈಂಕರ್ಯಗಳನ್ನು ನಡೆಸಲಾಯಿತು. ನಂತರ ಪಾರಂಪರಿಕವಾಗಿ ನಡೆದುಕೊಂಡು ಬಂದ ಕಂಬೋತ್ಸವವನ್ನು ನಡೆಸಲಾಯಿತು.

ಪ್ರತಿವರ್ಷ ದೇವಸ್ಥಾನದ ಆವರಣದಲ್ಲಿ ಐದು ಕಂಬಗಳನ್ನು ನೆಡಲಾಗುತ್ತಿತ್ತು, ಆದರೆ ಈ ವರ್ಷ ಕೊರಾನಾ ಮಹಾಮಾರಿ ಗಾಗಿ ಕೇವಲ ಸಾಂಕೇತಿಕವಾಗಿ ಎರಡು ಕಂಬಗಳನ್ನು ಹಾಕಿ ಕಂಬಾರೋಹಣ ಸ್ಪರ್ಧೆ ನಡೆಸಲಾಯಿತು.

ಈ ಮುಂಚೆ ಅರಸುಮನೆತನದ ರಾಜ ಕೃಷ್ಣಪ್ಪನಾಯಕ ಜನರಿಗೆ ಸಂದೇಶ ನೀಡಿ ವರ್ಷ ಜಾತ್ರೆ ಆಚರಣೆ ಇರುವುದಿಲ್ಲ ಹಿಂದಿನಿಂದ ನಡೆದುಕೊಂಡು ಬಂದ ಆಚರಣೆಗಳನ್ನು ಸಾಂಕೇತಿಕವಾಗಿ ನಡೆಸಲಾಗುತ್ತದೆ ಆದ್ದರಿಂದ ಭಕ್ತರು ತಮ್ಮ ಮನೆಗಳಲ್ಲಿಯೇ ವೇಣುಗೋಪಾಲನ ಪೂಜಾಕೈಂಕರ್ಯ ಆಚರಿಸುವ ಮೂಲಕ ಸಹಕರಿಸುವಂತೆ ತಿಳಿಸಿದ್ದರು. ಆದರೆ ದೇವರ ಬಗ್ಗೆ ಅಗಾಧವಾದ ಭಕ್ತಿ ಹೊಂದಿದ್ದ ಜನರು ಆಗಮಿಸಿ ದೇವರ ದರ್ಶನ ಪಡೆದು ಸಂತೋಷಪಟ್ಟರು.

ಪೊಲೀಸರು ಜನರನ್ನು ನಿಯಂತ್ರಿಸಲು ತುಂಬಾ ಪ್ರಯತ್ನಪಟ್ಟರಾದರು ಬೇರೆಬೇರೆ ಮಾರ್ಗಗಳಿಂದ ಆಗಮಿಸಿದ ಭಕ್ತರು ಬಲವಂತವಾಗಿ ಜಾತ್ರೆಯಲ್ಲಿ ಪಾಲ್ಗೊಂಡು ಕಂಬೋತ್ಸವವನ್ನು ವೀಕ್ಷಿಸಿದರು.