ಸರಳವಾಗಿ ಡಾ.ಬಿ.ಅರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಯಂತಿ ಆಚರಣೆಗೆ ನಿರ್ಣಯ

ಕಲಬುರಗಿ.ಏ.01:ಏಪ್ರಿಲ್ 5 ರಂದು ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಹಾಗೂ ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಕೋವಿಡ್ ಮಾರ್ಗಸೂಚಿಯನ್ವಯ ಸರಳವಾಗಿ ಆಚರಿಸಲು ಡಿ.ಸಿ. ವಿ.ವಿ.ಜ್ಯೋತ್ಸ್ನಾ ನೇತೃತ್ವದಲ್ಲಿ ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆ ನಿರ್ಣಯಿಸಿತು.
ಕೋವಿಡ್ ಎರಡನೇ ಅಲೇ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಮಾರ್ಚ್ ಮೊದಲನೇ ವಾರದಲ್ಲಿ ದಿನಕ್ಕೆ 10-15 ಕೊರೋನಾ ಪಾಸಿಟಿವ್ ಪತ್ತೆಯಾದರೆ ಇದೀಗ 150ಕ್ಕೂ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಅದರಲ್ಲಿಯೂ ಕೋವಿಡ್ ನಿಂದ ಮರಣ ಪ್ರಮಾಣ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕಿನ ತೀವ್ರತೆಯನ್ನು ಎಲ್ಲರು ಅರಿತು ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಸರಳ ಜಯಂತಿ ಆಚರಿಸಲು ಜಿಲ್ಲಾಡಳಿತಕ್ಕೆ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಿ.ಸಿ. ವಿ.ವಿ.ಜ್ಯೋತ್ಸ್ನಾ ಮತ್ತು ಡಿ.ಸಿ.ಪಿ. ಕಿಶೋರ ಬಾಬು ಅವರು ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು.
ಜಯಂತಿ ಹಿನ್ನೆಲೆಯಲ್ಲಿ ಡಾ.ಬಿ.ಅರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರ ಪುತ್ಥಳಿವಿರುವ ಪ್ರದೇಶದಲ್ಲಿ ಸ್ವಚ್ಚತೆ, ಹೂವಿನ ಅಲಂಕಾರ ಮತ್ತು ದೀಪಾಲಂಕಾರ ವ್ಯವಸ್ಥೆ ಮಾಡುವಂತೆ ಪಾಲಿಕೆ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ ಅವರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಶ ಸಾಸಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ. ಅಲ್ಲಾಭಕ್ಷ, ಡಾ.ಬಿ.ಆರ್.ಅಂಬೇಡ್ಕರ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ ಔರಾದಕರ, ಡಾ.ಬಾಬು ಜಗಜೀವನರಾಂ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ರಾಜು ವಾಡೇಕರ, ಬಂತೇಜಿ ಧಮ್ಮನಾಗ್, ಮುಖಂಡರಾದ ಸುರೇಶ ಹಾದಿಮನಿ, ಪ್ರಕಾಶ ಮೂಲಭಾರತಿ, ಸಾಗರ್, ದಶರಥ ಕುಲಗರ್ತಿ, ಪರಮೇಶ್ವರ ಖಾನಾಪುರ ಸೇರಿದಂತೆ ಇನ್ನಿತರ ಸಮಾಜದ ಮುಖಂಡರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.