ಸರಣಿ ಹಂತಕನ ಪತ್ನಿಗೆ ಜೀವಾವಧಿ ಶಿಕ್ಷೆ

ಪ್ಯಾರಿಸ್, ಡಿ.೨೦- ಮೂರು ಹತ್ಯೆ ಪ್ರಕರಣಗಳಲ್ಲಿ ಪಾತ್ರ ವಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಸರಣಿ ಹಂತಕ ಮೈಕೆಲ್ ಫೋರ್ನಿರೆಟ್‌ನ ಮಾಜಿ ಪತ್ನಿಗೆ ಫ್ರಾನ್ಸ್‌ನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಕನಿಷ್ಠ ೧೧ಕ್ಕೂ ಅಧಿಕ ಹತ್ಯೆ ಪ್ರಕರಣಗಳ ಆರೋಪಿಯಾಗಿದ್ದ ಫೋರ್ನಿರೆಟ್ ೨೦೨೧ರಲ್ಲಿ ವಿಚಾರಣೆಗೂ ಮುನ್ನ ನಿಧನ ಹೊಂದಿದ್ದರು. ಮೂಲಗಳ ಪ್ರಕಾರ ಫೋರ್ನಿರೆಟ್ ೨೨ಕ್ಕೂ ಹೆಚ್ಚು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಮೋನಿಕ್ ಒಲಿವಿಯರ್ (೭೫) ಶಿಕ್ಷೆಗೊಳಗಾದ ಮಹಿಳೆ. ಮೋನಿಕ್ ಕನಿಷ್ಠ ೨೦ ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ೨೦ ವರ್ಷದ ಬ್ರಿಟಿಷ್ ವಿದ್ಯಾರ್ಥಿನಿ ಜೊವಾನ್ನಾ ಪ್ಯಾರಿಶ್ ಮತ್ತು ಒಂಬತ್ತು ವರ್ಷದ ಬಾಲಕಿ ಸೇರಿದಂತೆ ಇಬ್ಬರು ಯುವತಿಯರನ್ನು ಫೌರ್ನಿರೆಟ್ ಹತ್ಯೆ ನಡೆಸಿದ್ದ. ಈ ಹತ್ಯೆ ಪ್ರಕರಣದಲ್ಲಿ ಮೋನಿಕ್ ಕೂಡ ಪಾತ್ರ ಹೊಂದಿರುವುದು ತನಿಖೆ ವೇಳೆ ಬಯಲಾಗಿತ್ತು. ೧೯೮೮ ರಲ್ಲಿ ಪ್ಯಾರಿಶ್ ಮತ್ತು ೧೮ ವರ್ಷದ ಮೇರಿ-ಏಂಜೆಲೆ ಡೊಮೆಸ್ ಅವರ ಅಪಹರಣ, ಕೊಲೆಯಲ್ಲಿ ಪಾತ್ರವನ್ನು ವಹಿಸಿದ್ದಕ್ಕಾಗಿ ಮೋನಿಕ್‌ಗೆ ಜೈಲುಶಿಕ್ಷೆಗೊಳಗಾಗಿದ್ದಾಳೆ. ಈ ಪೈಕಿ ಡೊಮೆಸ್‌ನ ಅತ್ಯಾಚಾರ ಯತ್ನದಲ್ಲಿ ಮತ್ತು ಫೋರ್ನಿರೆಟ್‌ನಿಂದ ಪ್ಯಾರಿಶ್‌ನ ಅತ್ಯಾಚಾರ ಪ್ರಕರಣದಲ್ಲಿ ಮೋನಿಕ್ ಕೂಡ ಪಾತ್ರ ವಹಿಸಿದ್ದಳು. ಅಲ್ಲದೆ ೨೦೦೩ರಲ್ಲಿ ಒಂಬತ್ತರ ಹರೆಯದ ಎಸ್ಟೆಲ್ಲೆ ಮೌಜಿನ್‌ಳ ಅಪಹರಣ ಹಾಗೂ ಹತ್ಯೆ ಪ್ರಕರಣದಲ್ಲಿ ಕೂಡ ಮೋನಿಕ್‌ಗೆ ಜೈಲುಶಿಕ್ಷೆ ನೀಡಲಾಗಿದೆ. ಅಲ್ಲದೆ ಮೌಜಿನ್‌ಳ ದೇಹವು ತೀವ್ರವಾದ ಹುಡುಕಾಟಗಳ ಹೊರತಾಗಿಯೂ ಪತ್ತೆಯಾಗಿರಲಿಲ್ಲ. ಇನ್ನು ಹತ್ಯೆ ಪ್ರಕರಣದಲ್ಲಿ ವಿಚಾರಣೆಗೂ ಮುನ್ನ ೨೦೨೧ರಲ್ಲಿ ೭೯ರ ಹರೆಯದಲ್ಲಿದ್ದ ಫೋರ್ನಿರೆಟ್ ನಿಧನರಾಗಿದ್ದರು. ಇನ್ನು ನಾಲ್ಕು ಅಪಹರಣ ಪ್ರಕರಣ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೦೮ರಿಂದಲೇ ಮೋನಿಕ್ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾಳೆ. ಇದೀಗ ಮತ್ತೆ ೨೦ ವರ್ಷಗಳ ಜೈಲುಶಿಕ್ಷೆಯನ್ನು ಮೋನಿಕ್‌ಗೆ ನೀಡಲಾಗಿದೆ.