ಸರಣಿ ರಸ್ತೆ ಅಪಘಾತ ೮ ಮಂದಿ ಸಾವು

ಬೆಂಗಳೂರು,ಡಿ.೨೭-ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಬಳಿ ಬಸ್ ಹಾಗೂ ಕ್ರೂಸರ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದು ಐವರು ತುಮಕೂರು ಜಿಲ್ಲೆಯ ಕಳ್ಳಂಬೆಳ್ಳದ ಬಳಿ ಲಾರಿ ಟ್ಯಾಂಕರ್ ಡಿಕ್ಕಿ ಹೊಡೆದು ಮೂವರು ಸೇರಿ ೮ ಮಂದಿ ಮೃತಪಟ್ಟಿರುವ ದಾರುಣ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಬಳಿ ಬಸ್ ಹಾಗೂ ಕ್ರೂಸರ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದು ಐವರು ಮೃತಪಟ್ಟು ೭ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರನ್ನು ತಿಮ್ಮಣ್ಣ (೪೦), ರತ್ನಮ್ನ (೩೮), ಮಹೇಶ್ (೧೯), ದುರ್ಗಪ್ಪ (೧೬) ಮತ್ತು ೫೫ ವರ್ಷದ ವೃದ್ಧರೊಬ್ಬರೆಂದು ಗುರುತಿಸಲಾಗಿದೆ. ಗಾಯಗೊಂಡಿರುವ ೭ ಮಂದಿಯನ್ನು ಸ್ಥಳೀಯ ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.
ರಾಯಚೂರಿನ ಲಿಂಗಸುಗೂರಿನಿಂದ ಬೆಂಗಳೂರಿಗೆ ಕ್ರೂಸರ್ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಬಿ.ಜಿ.ಕೆರೆ ಗ್ರಾಮದ ಬಳಿ ವೇಳೆ ಬೆಂಗಳೂರಿನಿಂದ ಲಿಂಗಸುಗೂರಿನತ್ತ ಬರುತ್ತಿದ್ದ ಬಸ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಗಾಯಳುಗಳನ್ನು ಸ್ಥಳೀಯ ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ಸಂಪೂರ್ಣ ಜಖಂಗೊಂಡಿದ್ದು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನಾ ಸ್ಥಳಕ್ಕೆ ಎಸ್ ಪಿ ರಾಧಿಕಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೊಳಕಾಲ್ಮೂರು ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಮೂವರು ಸಾವು
ತುಮಕೂರು ಜಿಲ್ಲೆಯ ಕಳ್ಳಂಬೆಳ್ಳದ ರಾಷ್ಟ್ರೀಯ ಹೆದ್ದಾರಿ ೪೮ ರವ ಗಾಂಧಿನಗರ ಸಮೀಪ ಸಂಭವಿಸಿದ ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ.
ಶಿರಾ ಕಡೆಯಿಂದ ತಮಿಳುನಾಡಿಗೆ ಕ್ಯಾಂಟರ್ ನಲ್ಲಿ ಭತ್ತ ಕಟಾವು ಮಾಡುವ ಯಂತ್ರವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಕ್ಯಾಂಟರ್ ಹಿಂಬದಿ ಚಕ್ರ ಪಂಚರ್ ಆಗಿದೆ. ಚಕ್ರ ಬದಲಿಸಲು ಚಾಲಕ ಮುಂದಾಗಿದ್ದಾರೆ. ಈ ವೇಳೆ ಬಳ್ಳಾರಿಯಿಂದ ಬೆಂಗಳೂರಿಗೆ ಮೊಟ್ಟೆ ತುಂಬಿಕೊಂಡು ಸಾಗುತ್ತಿದ್ದ ಲಾರಿ ಕ್ಯಾಂಟರ್ ಗೆ ಡಿಕ್ಕಿಯಾಗಿದೆ.
ಕ್ಯಾಂಟರ್ ಲಾರಿಯಲ್ಲಿದ್ದ ಭತ್ತ ಕಟಾವು ಮಾಡುವ ಯಂತ್ರದ ಆಪರೇಟರ್ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಹೊಳೆಅನ್ನೇರಿ ಗ್ರಾಮದ ನಿಂಗರಾಜು (೨೨) ಹಾಗೂ ದಾವಣಗೆರೆ ತಾಲ್ಲೂಕಿನ ಸ್ಯಾಗಳಿ ಗ್ರಾಮದ ಶ್ರೀನಿವಾಸ್ (೨೨) ಮತ್ತು ಲಾರಿ ಚಾಲಕ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮಹೇಶ್ (೨೫) ಸ್ಥಳದಲ್ಲೇ ಮೃತ ಪಟ್ಟಿದ್ದಾರೆ
ಕಳ್ಳಂಬೆಳ್ಳ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.