ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ, 73 ರನ್ ಗಳ ಭರ್ಜರಿ ಜಯ

ಕೊಲ್ಕತಾ, ನ.21-ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನದಿಂದಾಗಿ ನ್ಯೂಜಿಲೆಂಡ್ ವಿರುದ್ದ ಭಾರತ ಟಿ-20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.ಇಂದು ನಡೆದ ಅಂತಿಮ ಟಿ-20 ಪಂದ್ಯದಲ್ಲಿ ರೋಹಿತ್ ಪಡೆ 73 ರನ್ ಗಳ ಭರ್ಜರಿ ಜಯ ದಾಖಲಿಸಿದೆ.‌
ಈ ಮೂಲಕ ನಾಯಕನಾಗಿ ರೋಹಿತ್ ಶರ್ಮಾ ಮತ್ತು ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡ ರಾಹುಲ್ ದ್ರಾವಿಡ್ ಮೊದಲ ಸರಣಿಯಲ್ಲೇ ಸಫಲತೆ ಕಂಡಿದ್ದಾರೆ.
185 ರನ್ ಗಳ ಗುರಿಯನ್ನು ಬೆನ್ನಹತ್ತಿದ ನ್ಯೂಜಿಲೆಂಡ್, ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿತು.‌ 17.2 ಓವರ್ ಗಳಲ್ಲಿ 111 ರನ್ ಗಳಿಗೆ ಸರ್ವಪತನ‌ ಕಂಡು ಹೀನಾಯ ಸೋಲು ಅನುಭವಿಸಿತು.
3-0ಯಿಂದ ಪಾರಾಗಲು‌ ಕಿವೀಸ್ ಮೂರನೇ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಮಾರ್ಟಿನ್ ಗುಪ್ತಿಲ್ 51 ರನ್ ಗಳಿಸಿದರು. ಟಿಮ್ ಸೆಲ್ಫರ್ಟ್ 17 ಫರ್ಗೂಸನ್ 14 ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದ ಆಟಗಾರರು ಉತ್ತಮ ಆಟ ಪ್ರದರ್ಶಿಸಲು ವಿಫಲರಾದರು. ಇಬ್ಬರು ಆಟಗಾರರು ರನೌಟ್ ಆಗಿದ್ದು ನ್ಯೂಜಿಲೆಂಡ್ ಗೆ ಆಘಾತವುಂಟು ಮಾಡಿತು.
ಟಿ-20 ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದ ನ್ಯೂಜಿಲೆಂಡ್ , ಭಾರತದ ವಿರುದ್ಧ ಸರಣಿ ಸೋತು ಮುಖಭಂಗ ಅನುಭವಿಸಿದೆ.
ಭಾರತದ ಪರ ಅಕ್ಷರ್ ಪಟೇಲ್ 3, ಹರ್ಷಲ್ ಪಟೇಲ್ 2, ದೀಪಕ್ ಚಹರ್, ಚಹಲ್ ಹಾಗೂ ವೆಂಕಟೇಶ್ ತಲಾ ಒಂದು ವಿಕೆಟ್ ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.
ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿ 69 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಕಿಶಾನ್ 29 ರನ್ ಗಳಿಸಿ‌‌ ಔಟಾದರು. ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ನಿರ್ಗಮಿಸಿದರು.
ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ 31 ಎಸೆತಗಳಲ್ಲಿ 56 ರನ್ ಬಾರಿಸಿದರು. ಭಾರತದ ಏಕದಿನ ಮತ್ರು ಟೆಸ್ಟ್ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ 95 ಪಂದ್ಯಗಳ 87 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಕೊಹ್ಲಿ 29 ಇನ್ನಿಂಗ್ಸ್‌ನಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದರು.
119 ಪಂದ್ಯಗಳ 111 ಇನ್ನಿಂಗ್ಸ್‌ನಲ್ಲಿ 30 ಬಾರಿ 50ಕ್ಕಿಂತ ಹೆಚ್ಚು ರನ್ ಕಲೆ ಹಾಕಿರುವ ರೋಹಿತ್,
ಇದರಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ
ಮೂರು‌ ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ಚಿನಕುರುಳಿ ಕ್ರಿಕೆಟ್ ನಲ್ಲಿ 150 ಸಿಕ್ಸರ್ ಬಾರಿಸಿದ ಕೀರ್ತಿಗೆ ರೋಹಿತ್ ಪಾತ್ರರಾಗಿದ್ದಾರೆ.
ಶ್ರೇಯಸ್ 25, ವೆಂಕಟೇಶ್ 20, ಹರ್ಷಲ್ ಪಟೇಲ್ 18 ರನ್ ಗಳಿಸಿದರು. ದೀಪಕ್ ಚಹರ್ ಎಂಟು ಎಸೆತಗಳಲ್ಲಿ ಅಜೇಯ 21ರನ್ ಬಾರಿಸಿ ತಂಡ ಬೃಹತ್ ಮೊತ್ತ ಗಳಿಸಲು ನೆರವಾದರು. ಕಿವೀಸ್ ಪರ ಸಾಂಟ್ನರ್ ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.