ಸರಣಿ ಕಳ್ಳರ ಬಂಧನ: ಕುರಿ ಆಡು, ಆಹಾರ ಸಾಮಾಗ್ರಿಗಳ ಜಪ್ತಿ

ಚಿಂಚೋಳಿ,ಜು.24- ಕುರಿದೊಡ್ಡಿಯಲ್ಲಿನ ಆಡುಗಳನ್ನು ಮತ್ತು ಶಾಲೆಯ ಬಿಸಿಯೂಟದ ಆಹಾರ ಸಮಾಗ್ರಿಗಳನ್ನು ದೋಚಿದ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ನಾಗಿದಲಾಯಿ ಗ್ರಾಮದ ಹಣಮಂತ ಹೊಸಮನಿ ಹಾಗೂ ದೇವಿಂದ್ರಪ್ಪ ಅವರಿಗೆ ಸೇರಿದ 7 ಆಡುಗಳನ್ನು ಮತ್ತು ಬೆನಕಿಪಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಬಿಸಿಯೂಟದ ಆಹಾರ ಸಮಾಗ್ರಿಗಳನ್ನು ಕಳ್ಳತನ ಮಾಡಿದ ಪ್ರತ್ಯೇಕ ಪ್ರಕರಣಗಳನ್ನು ಬೇದಿಸಿದ ಪೊಲೀಸರ ವಿಶೇಷ ತಂಡ, ಮೂರು ಜನ ಆರೋಪಿಗಳನ್ನು ಬಂಧಿಸಿ ಅವರಿಂದ ಕಳ್ಳತನದ ವಸ್ತುಗಳನ್ನು ಜಪ್ತಿಮಾಡಿದ್ದಾರೆ.
ಕಲಬುರಗಿ ಎಸ್ಪಿ ಮತ್ತು ಹೆಚ್ಚುವರಿ ಎಸ್ಪಿ, ಪೊಲೀಸ ಉಪ ಅಧಿಕ್ಷಕ ಬಸವರಾಜ ಕೆ, ಅವರ ಮಾರ್ಗದರ್ಶನದಲ್ಲಿ ಚಿಂಚೋಳಿ ಸಿಪಿಐ ಮಹಾಂತೇಶ ಪಾಟೀಲ, ಪಿಎಸ್‍ಐ ಮಂಜುನಾಥ ರೆಡ್ಡಿ ನೆತೃತ್ವದ ತಂಡ ನಿಖರ ಮಾಹಿತಿಯ ಮೇರೆಗೆ ದಾಳಿ ನಡೆಸಿ ಸರಣಿ ಕಳ್ಳನತದ ಆರೋಪಿಗಳಾದ ಬೆನಕಿಪಳ್ಳಿ ಗ್ರಾಮದ ಅನೀಲ ಹಣಮಂತ ಬ್ಯಾಡಗಿ, ವೈಜನಾಥ ಶಿವರಾಜ ಬೇಡರ ಮತ್ತು ನಿಖಿಲ ಶರಣಪ್ಪ ಧೋಬಿ ಎಂಬುವವರನ್ನು ಬಂಧಿಸಿ ಅವರಿಂದ ಆಡುಗಳನ್ನು, ಬಿಸಿಯೂಟದ ಆಹಾರ ದಾನ್ಯ ಮತ್ತು ಪದಾರ್ಥಗಳನ್ನು ಜಪ್ತಿಮಾಡಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.