ಸರಣಿ ಅಪಘಾತ 30 ಮಂದಿಗೆ ಗಾಯ

ಬೆಂಗಳೂರು,ಡಿ. ೨೭- ರಾಷ್ಟ್ರೀಯ ಹೆದ್ದಾರಿ ೪ರ ನೆಲಮಂಗಲದ ತೋಣಚಿನ ಕುಪ್ಪೆ ಬಳಿ ಸರಣಿ ಅಪಘಾತ ಸಂಭವಿಸಿ ೩೦ ಮಂದಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ.
ನಿಂತಿದ್ದ ಲಾರಿಗೆ ಮೂರು ಖಾಸಗಿ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ಗಾಯಗೊಂಡಿರುವ ೩೦ ಮಂದಿಯನ್ನು ಖಾಸಗಿ ಅಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಅವರಲ್ಲಿ ಇಬ್ಬರು ಸ್ಥಿತಿ ಗಂಭೀರವಾಗಿದೆ.
ಸರಣಿ ಅಪಘಾತದಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ದುರ್ಗಾಂಬಾ, ಶಿವಗಂಗಾ, ದ್ಯಾನ್ ಹೆಸರಿನ ಖಾಸಗಿ ಬಸ್ಸುಗಳು ತುಮಕೂರು ಮಾರ್ಗವಾಗಿ ಬೆಂಗಳೂರು ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಲಾರಿಗೆ ಮೊದಲು ದ್ಯಾನ್ ಬಸ್ ಡಿಕ್ಕಿ ಹೊಡೆದಿದೆ. ದ್ಯಾನ್ ಬಸ್ ಹಿಂದೆಯೇ ದುರ್ಗಾಂಬಾ ಬಸ್ ಬರುತ್ತಿತ್ತು. ಈ ಅಪಘಾತವನ್ನು ಕಂಡ ದುರ್ಗಾಂಬಾ ಚಾಲಕ ಬಸ್ ಅನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದರು. ಆದರೆ ಹಿಂದೆ ಬರುತ್ತಿದ್ದ ಶಿವಗಂಗಾ ಬಸ್ ಡಿಕ್ಕಿ ಹೊಡೆದಿದೆ.
ಈ ಸರಣಿ ಅಪಘಾತದಲ್ಲಿ ಗಾಯಗೊಂಡ ಮಂದಿಯನ್ನು ಏಳು ಆಂಬ್ಯುಲೆನ್ಸ್‌ಗಳ ಮುಖಾಂತರ ಅಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಬಳಿಕ ಬಸ್‌ಗಳನ್ನು ಕ್ರೈನ್ ಬಳಸಿ ತೆರವು ಮಾಡಲಾಗಿದೆ.
೩ವರ್ಷದ ಮಗು ಸಾವು:
ಕಾರು ಹರಿದು ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಬೀದರ್ ನಗರದ ಗುಂಪಾರಸ್ತೆಯಲ್ಲಿ ನಡೆದಿದೆ. ಬಸವಚೇತನ ಮೃತ ಮಗು. ಮೃತ ಬಸವಚೇತನ ಹಾರುಗೇರಿ ನಿವಾಸಿ ಸತೀಶ್ ಪಾಟೀಲ್ ಹಾಗೂ ಸಂಗಿತಾ ದಂಪತಿ ಪುತ್ರ. ಮಗುವಿನ ಮೇಲೆ ಕಾರು ಹರಿದ ಭಯಾನಕ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.